ADVERTISEMENT

ಸೈಕಲ್‌ನಲ್ಲಿ ಪೊಲೀಸರ ಗಸ್ತು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 16:56 IST
Last Updated 15 ಡಿಸೆಂಬರ್ 2019, 16:56 IST
ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ನೀಡಿರುವ ಸೈಕಲ್
ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ನೀಡಿರುವ ಸೈಕಲ್   

ಬೆಂಗಳೂರು: ಇಷ್ಟುದಿನ ವಾಹನ ಹಾಗೂ ಬೈಕ್‌ನಲ್ಲಿ ಮಾತ್ರ ಗಸ್ತು ತಿರುಗುತ್ತಿದ್ದ ಪೊಲೀಸರು, ಇನ್ನು ಮುಂದೆ ಸೈಕಲ್‌ನಲ್ಲೂ ಗಸ್ತು ಹೊಡೆಯಲಿದ್ದಾರೆ.

ನಗರ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ‘ಪೆಡಲ್‌ ಪೊಲೀಸ್’ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಪ್ರತಿ ಠಾಣೆಗೂ ಐದು ಸೈಕಲ್‌ಗಳನ್ನು ವಿತರಿಸಲಾಗುತ್ತಿದೆ. ಈ ಹೊಸ ವ್ಯವಸ್ಥೆಗೆ ಕಮಿಷನರ್ ಭಾಸ್ಕರ್ ರಾವ್ ಅವರು ಭಾನುವಾರ ಚಾಲನೆ ನೀಡಿದರು.

ಆರಂಭದಲ್ಲೇ ಕಬ್ಬನ್ ಪಾರ್ಕ್ ಠಾಣೆಯ ಐವರು ಕಾನ್‌ಸ್ಟೆಬಲ್‌ಗಳಿಗೆ ರೇನ್‌ಕೋಟ್‌ ಸಮೇತವಾಗಿ ಸೈಕಲ್‌ ವಿತರಿಸಲಾಯಿತು. ಖುದ್ದು ಭಾಸ್ಕರ್‌ ರಾವ್ ಅವರೇ ಸೈಕಲ್ ಏರಿ ಕಬ್ಬನ್ ಉದ್ಯಾನದಲ್ಲಿ ಒಂದು ಸುತ್ತು ಹಾಕಿದರು. ಸಿಬ್ಬಂದಿಯೂ ಅವರನ್ನು ಹಿಂಬಾಲಿಸಿದರು.

ADVERTISEMENT

‘ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಕ್ಕಟ್ಟಾದ ಜಾಗಗಳಲ್ಲಿ ವಾಹನ ಹಾಗೂ ಬೈಕ್‌ಗಳಲ್ಲಿ ಗಸ್ತು ತಿರುಗುವುದು ಕಷ್ಟ. ಅಂಥ ಸ್ಥಳಗಳಲ್ಲಿ ಗಸ್ತು ತಿರುಗುವುದಕ್ಕಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ಖಾಸಗಿ ಕಂಪನಿಯೊಂದು ಸೈಕಲ್ ನೀಡಿದೆ’ ಎಂದು ಭಾಸ್ಕರ್ ರಾವ್ ಹೇಳಿದರು.

‘ಪ್ರಾಯೋಗಿಕವಾಗಿ ಕಬ್ಬನ್ ಉದ್ಯಾನದಲ್ಲಿ ಕಾನ್‌ಸ್ಟೆಬಲ್‌ಗಳು ಗಸ್ತು ತಿರುಗಲಿದ್ದಾರೆ. ಕ್ರಮೇಣ ಈ ವ್ಯವಸ್ಥೆಯನ್ನು ನಗರದ ಎಲ್ಲ ಠಾಣೆ ವ್ಯಾಪ್ತಿಯಲ್ಲಿ ವಿಸ್ತರಿಸಲಾಗುವುದು. ಇದು ಪರಿಸರಸ್ನೇಹಿ ವ್ಯವಸ್ಥೆಯೂ ಹೌದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.