ADVERTISEMENT

ಬಿಡದಿ ಬೈಪಾಸ್ ಸಂಚಾರಕ್ಕೆ ಮುಕ್ತ

ಗೌರಿ ಹಬ್ಬಕ್ಕೆ ರಾಮನಗರ–ಚನ್ನಪಟ್ಟಣ ಬೈಪಾಸ್ ಸೇವೆಗೆ ಲಭ್ಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 20:09 IST
Last Updated 23 ಆಗಸ್ಟ್ 2022, 20:09 IST
ಮುಕ್ತಾಯ ಹಂತದಲ್ಲಿರುವ ಬೈಪಾಸ್ ಕಾಮಗಾರಿ
ಮುಕ್ತಾಯ ಹಂತದಲ್ಲಿರುವ ಬೈಪಾಸ್ ಕಾಮಗಾರಿ   

ರಾಮನಗರ/ಬಿಡದಿ: ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಹೊಸತಾಗಿ ನಿರ್ಮಿಸಲಾಗಿರುವ ಬಿಡದಿ ಬೈಪಾಸ್ ಮಂಗಳವಾರದಿಂದ ಏಕಮುಖ ಸಂಚಾರಕ್ಕೆ ಮುಕ್ತವಾಗಿದೆ. ರಾಮ ನಗರ–ಚನ್ನಪಟ್ಟಣ ಬೈಪಾಸ್ ಇದೇ 30ರಿಂದ ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ.

ಈ ಕುರಿತು ಸಂಸದ ಪ್ರತಾಪ ಸಿಂಹ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಬೈಪಾಸ್‌ನ ಒಂದು ಭಾಗದಲ್ಲಿ ಬೆಟ್ಟ ಕೊರೆಯುವ ಕಾಮಗಾರಿ ವಿಳಂಬ ಆದ ಕಾರಣಕ್ಕೆ ರಸ್ತೆಯನ್ನು ತಡವಾಗಿ ಉದ್ಘಾಟಿಸಲಾಗುತ್ತಿದೆ. ಸದ್ಯ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುವವರು ಈ ಬೈಪಾಸ್ ಬಳಸಬಹುದು. ಇನ್ನೆರಡು ದಿನದಲ್ಲಿ ಇನ್ನೊಂದು ಬದಿಯನ್ನೂ ಮುಕ್ತಗೊಳಿಸಲಾಗುತ್ತಿದೆ. ರಾಮನಗರ– ಚನ್ನಪಟ್ಟಣ ಬೈಪಾಸ್‌ನ 23 ಕಿ.ಮೀ. ಉದ್ದದ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಅವೂ ಸಹ ಗೌರಿ ಹಬ್ಬದ ವೇಳೆಗೆ ತೆರೆದುಕೊಳ್ಳಲಿವೆ. ಸರ್ವೀಸ್ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ದಸರಾ ಒಳಗೆ ಈ ಹೆದ್ದಾರಿಯನ್ನು ಉದ್ಘಾಟಿಸಬೇಕು ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಇನ್ನೂ ನಮಗೆ ಅವಕಾಶ ಇದ್ದು, ಪ್ರಯತ್ನ ನಡೆಸಲಿದ್ದೇವೆ. ಮದ್ದೂರು, ಮಂಡ್ಯ ಹಾಗೂ ಶ್ರೀರಂಗಪಟ್ಟಣ ಬೈ‍ಪಾಸ್‌ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಇದಕ್ಕೆ ಇರುವ ಅಡೆತಡೆ ನಿವಾರಿಸುವ ಪ್ರಯತ್ನ ನಡೆದಿದೆ’ ಎಂದು
ವಿವರಿಸಿದ್ದಾರೆ.

‘ಪ್ರತಿನಿತ್ಯವೂ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿರುವುದರಿಂದ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲು ಆಗುತ್ತಿರಲಿಲ್ಲ. ದಶ‍ಪಥ ನಿರ್ಮಿಸುತ್ತಿರುವುದು ಸಹಕಾರಿಯಾಗಿದೆ. ಚನ್ನಪಟ್ಟಣದವರೆಗೆ ಎರಡು ಕಡೆಯಿಂದ ಸಂಚರಿಸಲು ಅವಕಾಶ ಮಾಡಿಕೊಟ್ಟರೆ ಅನುಕೂಲವಾಗಲಿದೆ. ನಾಡಹಬ್ಬ ದಸರಾದೊಳಗೆ ಎರಡು ಕಡೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಹೆದ್ದಾರಿ ಪ್ರಾಧಿಕಾರ ಕ್ರಮವಹಿಸಬೇಕು’ ಎಂದು ಮದ್ದೂರು ಗ್ರಾಮದ ನರಸಿಂಹಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.