ADVERTISEMENT

ಬೆಂಗಳೂರು: ರಸ್ತೆಗುಂಡಿಯಿಂದ ಮತ್ತೊಂದು ಅಪಘಾತ, ಬೈಕ್ ಹಿಂಬದಿ ಸವಾರ ಸಾವು

ವಿದ್ಯಾರ್ಥಿ ಸಾವು l ಕಾರು ಚಾಲಕ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 21:29 IST
Last Updated 30 ಅಕ್ಟೋಬರ್ 2022, 21:29 IST
ಅಟ್ಟೂರು ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದ ಅಪಘಾತದಿಂದಾಗಿ ಉರುಳಿಬಿದ್ದಿರುವ ಬೈಕ್ ಹಾಗೂ ಕಾರು (ಎಡಚಿತ್ರ) ಅಟ್ಟೂರು ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ನೀರು ನಿಂತಿರುವುದು
ಅಟ್ಟೂರು ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಸಂಭವಿಸಿದ್ದ ಅಪಘಾತದಿಂದಾಗಿ ಉರುಳಿಬಿದ್ದಿರುವ ಬೈಕ್ ಹಾಗೂ ಕಾರು (ಎಡಚಿತ್ರ) ಅಟ್ಟೂರು ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿಯಲ್ಲಿ ನೀರು ನಿಂತಿರುವುದು   

ಬೆಂಗಳೂರು: ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯ ಅಟ್ಟೂರು ಮುಖ್ಯರಸ್ತೆಯಲ್ಲಿ ಕಾರು ಹಾಗೂ ಬೈಕ್ ನಡುವೆ ಶನಿವಾರ ರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್ ಹಿಂಬದಿ ಸವಾರ ಹರ್ಷದ್ (22) ಎಂಬುವರು ಮೃತಪಟ್ಟಿದ್ದಾರೆ.

‘ಹದಗೆಟ್ಟ ರಸ್ತೆಯಲ್ಲಿರುವ ಗುಂಡಿಗಳಿಂದ ಅಪಘಾತ ಸಂಭವಿಸಿದೆ’ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

‘ಮೃತ ಹರ್ಷದ್, ಕೇರಳದವರು. ಜಾಲಹಳ್ಳಿಯಲ್ಲಿ ನೆಲೆಸಿದ್ದ ಅವರು, ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅರೆಕಾಲಿಕ ಕೆಲಸಕ್ಕೂ ಹೋಗಿ ಬರುತ್ತಿದ್ದರು. ಸ್ನೇಹಿತ ರಾಹುಲ್ (23) ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದ ಬಳಿಕ ಕಾರು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಕಾರು– ಬೈಕ್ ಮುಖಾಮುಖಿ ಡಿಕ್ಕಿ: ‘ರಾಹುಲ್ ಹಾಗೂ ಹರ್ಷದ್, ರಾತ್ರಿ 11 ಗಂಟೆ ಸುಮಾರಿಗೆ ಪಲ್ಸರ್ ಬೈಕ್‌ನಲ್ಲಿ (ಕೆಎ 04 ಇಎಫ್‌ 2074) ಅಟ್ಟೂರಿನಿಂದ ಮುಖ್ಯರಸ್ತೆ ಮೂಲಕ ಜಾಲಹಳ್ಳಿ ಕಡೆಗೆ ಹೊರಟಿದ್ದರು. ಇದೇ ಸಂದರ್ಭದಲ್ಲೇ ರಾಯಲ್ ಕಾನ್ ಕಾರ್ಡ್ ಸ್ಕೂಲ್ (ವಿವೇಕಾನಂದ ಸ್ಕೂಲ್) ಎದುರು ಆರೋಪಿತ ಚಾಲಕ, ತನ್ನ ವೋಕ್ಸ್ ವ್ಯಾಗನ್ ಕಾರನ್ನು (ಕೆಎ 50 ಎಂಎ 2520) ಅತೀ ವೇಗವಾಗಿ ಚಲಾಯಿಸಿದ್ದ. ಇದರಿಂದಾಗಿ ಕಾರು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸರು ತಿಳಿಸಿದರು.

‘ಅಪಘಾತದಿಂದ ಬೈಕ್ ರಸ್ತೆಯಲ್ಲೇ ಉರುಳಿಬಿದ್ದಿತ್ತು. ತೀವ್ರ ಗಾಯಗೊಂಡಿದ್ದ ಹರ್ಷದ್ ಹಾಗೂ ರಾಹುಲ್, ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ್ದ ವೈದ್ಯರು, ಮಾರ್ಗ ಮಧ್ಯೆಯೇ ಹರ್ಷದ್ ಮೃತಪಟ್ಟಿರುವುದಾಗಿ ಹೇಳಿದರು. ರಾಹುಲ್‌ ಆರೋಗ್ಯ ಸಹ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅಪಘಾತದಿಂದಾಗಿ ಕಾರು ಸಹ ರಸ್ತೆಬದಿಯಲ್ಲಿ ಉರುಳಿಬಿದ್ದಿತ್ತು. ಸ್ಥಳೀಯರು ಸ್ಥಳದಲ್ಲಿ ಸೇರುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ. ಎಂ. ಅಭಿಷೇಕ್ ಹೆಸರಿನಲ್ಲಿ ಕಾರು ನೋಂದಣಿ ಆಗಿದ್ದು, ಅದನ್ನು ಆಧರಿಸಿ ಚಾಲಕನನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ತಿಳಿಸಿದರು.

ಮಳೆಯಿಂದ ರಸ್ತೆಗುಂಡಿಯಲ್ಲಿ ನಿಂತಿದ್ದ ನೀರು: ‘ಶನಿವಾರ ರಾತ್ರಿ ಮಳೆ ಸುರಿಯುತ್ತಿತ್ತು. ಅಟ್ಟೂರು ಮುಖ್ಯರಸ್ತೆಯಲ್ಲಿ ಹೆಚ್ಚಿರುವ ಗುಂಡಿಗಳಲ್ಲಿ ನೀರು ನಿಂತುಕೊಂಡಿತ್ತು. ಇದನ್ನು ಗಮನಿಸದೇ ಚಾಲಕ, ಅತೀ ವೇಗವಾಗಿ ಕಾರು ಚಲಾಯಿಸಿದ್ದ. ಗುಂಡಿಗಳಲ್ಲಿ ಚಕ್ರ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವ ಅನುಮಾನವಿದೆ’ ಎಂದು ಮೃತ ಹರ್ಷದ್ ಸ್ನೇಹಿತ ದೂರು ನೀಡಿದ್ದಾರೆ. ಹೀಗಾಗಿ, ಕಾರು ಚಾಲಕ ಹಾಗೂ ಬಿಬಿಎಂಪಿ ಅಧಿಕಾರಿಗಳು ಇಬ್ಬರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಪಘಾತ ಸ್ಥಳದ ಸುತ್ತಮುತ್ತ ಗುಂಡಿಗಳು ಇರುವುದು ಪರಿಶೀಲನೆಯಿಂದ ಗೊತ್ತಾಗಿದೆ. ಆದರೆ, ಗುಂಡಿಯಿಂದಲೇ ಅಪಘಾತ ಸಂಭವಿಸಿದೆ ಎಂದು ಸದ್ಯಕ್ಕೆ ನಿರ್ಧರಿಸಲಾಗದು. ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದ ಅನುಮಾನವೂ ಇದೆ. ಹೀಗಾಗಿ, ಅಪಘಾತ ಹೇಗಾಯಿತು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ತನಿಖೆಯಿಂದಲೇ ನಿಜಾಂಶ ತಿಳಿಯಲಿದೆ’ ಎಂದು ತಿಳಿಸಿದರು.

ರಸ್ತೆ ಗುಂಡಿಯಿಂದ ಅಪಘಾತವಾಗಿದ್ದ ಪ್ರಕರಣಗಳು

- 2022 ಅಕ್ಟೋಬರ್ 17: ರಾಜಾಜಿನಗರದ ಲುಲು ಗ್ಲೋಬಲ್ ಮಾಲ್‌ ಎದುರು ರಸ್ತೆ ಗುಂಡಿ ತಪ್ಪಿಸುವಾಗ ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು, ಉಮಾದೇವಿ (42) ಅವರು ಮೃತಪಟ್ಟಿದ್ದರು

- 2022ರ ಮಾರ್ಚ್ 13: ಎಂ.ಎಸ್. ಪಾಳ್ಯದ ಮುನೇಶ್ವರ ಬಡಾವಣೆಯಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್ ಉರುಳಿಬಿದ್ದಿದ್ದು, ಸವಾರ ಅಶ್ವಿನ್ ಜುಗ್ಡೆ (27) ಮೃತಪಟ್ಟಿದ್ದರು

- 2022ರ ಜನವರಿ 29: ಬ್ಯಾಡರಹಳ್ಳಿ ಮುಖ್ಯರಸ್ತೆಯ ಅಂಜನಾನಗರ ವೃತ್ತದಲ್ಲಿ ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿ ಶಿಕ್ಷಕಿ ಶರ್ಮಿಳಾ (38) ಎಂಬುವರು ಮೃತಪಟ್ಟಿದ್ದರು

- 2021ರ ಸೆಪ್ಟೆಂಬರ್ 7: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಯಿಂದಾಗಿ ದ್ವಿಚಕ್ರ ವಾಹನ ಉರುಳಿ
ಬಿದ್ದಿದ್ದು, ಮೈಕೊ ಲೇಔಟ್‌ನ ಬಿಸ್ಮಿಲ್ಲಾ ನಗರದ
ಸವಾರ ಖುರ್ಷಿದ್ ಅಹ್ಮದ್ (65) ಎಂಬುವರು ಮೃತಪಟ್ಟಿದ್ದರು

- 2021ರ ನ. 27: ಥಣಿಸಂದ್ರ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿಯಲ್ಲಿ ಆಯತಪ್ಪಿ ಬಿದ್ದ ಸ್ಕೂಟರ್ ಸವಾರ ಅಜೀಂ ಅಹ್ಮದ್‌ (21) ಎಂಬುವರಿಗೆ ಗೂಡ್ಸ್‌ ವಾಹನವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಜೀಂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.