ADVERTISEMENT

ಬೆಂಗಳೂರು | ಅಪಘಾತ ಪ್ರಕರಣ: ಬೈಕ್ ಸವಾರ - ವಾಹನ ಚಾಲಕನಿಗೆ ಶಿಕ್ಷೆ

ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 15:42 IST
Last Updated 29 ಡಿಸೆಂಬರ್ 2023, 15:42 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಪಾದಚಾರಿಗೆ ಬೈಕ್‌ನಿಂದ ಡಿಕ್ಕಿ ಹೊಡೆಸಿ, ಗಾಯಗೊಳಿಸಿದ್ದ ಸವಾರನಿಗೆ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ 6 ತಿಂಗಳು ಜೈಲು ಹಾಗೂ ₹1 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಜಗದೀಶ್‌ (26) ಶಿಕ್ಷೆಗೆ ಒಳಗಾದ ಬೈಕ್‌ ಸವಾರ.

‘ಉಪ್ಪಾರಪೇಟೆ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೆ.ಜಿ. ರಸ್ತೆಯಲ್ಲಿ 2016ರ ಮಾರ್ಚ್ 14ರಂದು ರಾತ್ರಿ ಅಪಘಾತ ಸಂಭವಿಸಿತ್ತು. ಭಾವನಾ ಎಂ ರಾಜಪಾಲ್‌ ಎಂಬುವರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ವೇಗವಾಗಿ ಬಂದ್‌ ಬೈಕ್‌ವೊಂದು ಅವರಿಗೆ ಡಿಕ್ಕಿ ಹೊಡೆದಿತ್ತು. ಭಾವನಾ ಅವರ ಎರಡು ಕಾಲುಗಳಿಗೆ ಗಾಯವಾಗಿತ್ತು. ಅಪಘಾತವಾದ ಮೇಲೆ ಬೈಕ್‌ ನಿಲ್ಲಿಸದೇ ಸವಾರ ತೆರಳಿದ್ದ. ಹತ್ತಿರದ ಪೊಲೀಸ್‌ ಠಾಣೆಗೂ ಮಾಹಿತಿ ನೀಡಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅಪರಾಧಿ ಬಳಿಯಿದ್ದ ವಾಹನಕ್ಕೆ ವಿಮೆ ಇಲ್ಲದಿರುವುದು ತನಿಖೆಯಿಂದ ದೃಢಪಟ್ಟಿತ್ತು.

ADVERTISEMENT

1 ವರ್ಷ ಜೈಲು: ಗಾಂಧಿನಗರದಲ್ಲಿ 2010ರ ಆಗಸ್ಟ್‌ 19ರಂದು ನಡೆದಿದ್ದ ಅಪಘಾತ ಪ್ರಕರಣದಲ್ಲಿ ವಾಹನ ಚಾಲಕ ತಪ್ಪಿತಸ್ಥ ಎಂಬುದು ಸಾಬೀತಾಗಿದ್ದು ಆತನಿಗೆ 2ನೇ ಎಂಎಂಟಿಸಿ ಸಂಚಾರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಚಾಲಕ ನವೀನ್‌ ಕುಮಾರ್‌ಗೆ 1 ವರ್ಷ ಜೈಲು ಶಿಕ್ಷೆ, ₹ 5 ಸಾವಿರ ದಂಡ ವಿಧಿಸಿ ನ್ಯಾಯಾಲಯವು ಆದೇಶಿಸಿದೆ.

ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿಕೊಂಡು ತೆರಳುತ್ತಿದ್ದ ನವೀನ್‌ಕುಮಾರ್‌, ಏಕಾಏಕಿ ವಾಹನವನ್ನು ಎಡಕ್ಕೆ ತಿರುಗಿಸಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಸಿದ್ದ. ಘಟನೆಯಲ್ಲಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಜಯ್‌ (11) ಹಾಗೂ ಶಿವಲೀಲಾ (47) ಅವರು ಮೃತಪಟ್ಟಿದ್ದರು. ಸರಸ್ವತಮ್ಮ (45), ಪಾರ್ಥ (12) ಹಾಗೂ ಅಭಿಲಾಷ್‌ (12) ಅವರು ಗಾಯಗೊಂಡಿದ್ದರು.

ವಾಹನಕ್ಕೆ ಎಫ್‌ಸಿ ಹಾಗೂ ಚಾಲಕನ ಬಳಿ ಡಿಎಲ್‌ ಇಲ್ಲದಿರುವುದು ಪೊಲೀಸ್‌ ತನಿಖೆ ವೇಳೆ ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.