ADVERTISEMENT

ಬೈಕ್ ಟ್ಯಾಕ್ಸಿ ನಿಷೇಧ: ಹತ್ತಕ್ಕೂ ಅಧಿಕ ಮಂದಿ ವಿರುದ್ಧ ಎಫ್‌ಐಆರ್

ವಿಧಾನಸೌಧದ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 17:34 IST
Last Updated 22 ಜೂನ್ 2025, 17:34 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೈಕ್‌ ಟ್ಯಾಕ್ಸಿ ನಿಷೇಧ ವಿರೋಧಿಸಿ ವಿಧಾನಸೌಧದ ಬಳಿ ಕಾನೂನುಬಾಹಿರವಾಗಿ ಪ್ರತಿಭಟನೆ ಮಾಡಿದ ಆರೋಪದಡಿ 10ಕ್ಕೂ ಅಧಿಕ ಮಂದಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ವಿಧಾನಸೌಧ ಪೊಲೀಸ್‌ ಠಾಣೆಯ ಪಿಎಸ್‌ಐ ಪುಟ್ಟಸ್ವಾಮಯ್ಯ ಅವರು ನೀಡಿದ ದೂರಿನ ಮೇರೆಗೆ ಲಕ್ಷ್ಮೀ ಸಾಗರ್‌, ಚಂದ್ರಶೇಖರ್, ಪವನ್‌ ಕುಮಾರ್‌, ಜಾನ್‌ಪಾಷಾ, ಮನೋಜ್‌, ಶಶಿಕಾಂತ್‌, ಕುಮಾರಸ್ವಾಮಿ ಸೇರಿ 10ಕ್ಕೂ ಅಧಿಕ ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗಳಿಗೆ ನಿಯಮ ರೂಪಿಸುವಂತೆ ಹಾಗೂ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸುವಂತೆ ಆಗ್ರಹಿಸಿ ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಐದು ಸಾವಿರಕ್ಕೂ ಅಧಿಕ ಬೈಕ್‌ ಟ್ಯಾಕ್ಸಿ ಚಾಲಕರು ಜೂನ್ 21ರಂದು ವಿಧಾನಸೌಧದ ಎದುರು ರ್‍ಯಾಲಿ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಿಂದ ಮಾಹಿತಿ ಸಿಕ್ಕಿತು. ಬಳಿಕ ನಾನು ಹಾಗೂ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಅಂಬೇಡ್ಕರ್‌ ಪ್ರತಿಮೆ ಬಳಿ ಬಂದೋಬಸ್ತ್‌ ಮಾಡಿದ್ದೆವು. ಮಧ್ಯಾಹ್ನ ಸುಮಾರು 2.20ಕ್ಕೆ 15-20 ಮಂದಿ ಕಾಲ್ನಡಿಗೆಯಲ್ಲಿ ವಿಧಾನಸೌಧದ ಎದುರಿನ ಕೆಂಪೇಗೌಡ ಪ್ರತಿಮೆ ಬಳಿಗೆ ಬಂದು, ಪ್ರತಿಭಟನೆ ಮಾಡಿದ್ದಾರೆ’ ಎಂದು ಪಿಎಸ್‌ಐ ಪುಟ್ಟಸ್ವಾಮಯ್ಯ ದೂರಿನಲ್ಲಿ ತಿಳಿಸಿದ್ದಾರೆ.

‘ಅನುಮತಿ ಪಡೆದು ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ. ಆದರೂ ಪ್ರತಿಭಟನಕಾರರು ಅನುಮತಿ ಇಲ್ಲದೇ ವಿಧಾನಸೌಧದ ಆವರಣದಲ್ಲಿ ಗುಂಪು ಸೇರಿ ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.