ADVERTISEMENT

ಬೈಕ್‌ ಟ್ಯಾಕ್ಸಿ ಇನ್ನು ಅಧಿಕೃತ- ಸಾರಿಗೆ ಪ್ರಾಧಿಕಾರ ಒಪ್ಪಿಗೆ

ಎರಡು ಸಂಸ್ಥೆಗಳಿಗೆ ಪರವಾನಗಿ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 19:06 IST
Last Updated 6 ಡಿಸೆಂಬರ್ 2022, 19:06 IST
   

ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಪರವಾನಗಿ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರ(ಎಸ್‌ಟಿಎ) ನಿರ್ಧರಿಸಿದ್ದು, ಬೈಕ್‌ ಟ್ಯಾಕ್ಸಿಗಳು ಇನ್ನು ಅಧಿಕೃತವಾಗಿ ರಸ್ತೆಗೆ ಇಳಿಯಲಿವೆ.

ಈ ಸಂಬಂಧ ನಗರದಲ್ಲಿ ಮಂಗಳವಾರ ನಡೆದ ಎಸ್‌ಟಿಎ ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಈ ನಿರ್ಣಯ ಕೈಗೊಂಡಿದ್ದಾರೆ. ಬ್ಲೂ ಸ್ಮಾರ್ಟ್ ಮತ್ತು ಬೌನ್ಸ್‌ ಕಂಪನಿಗಳಿಗೆ ಪರವಾನಗಿ ನೀಡಲು ಸಭೆ ಒಪ್ಪಿದೆ.

ಬಸ್, ರೈಲು ಮತ್ತು ಮೆಟ್ರೊ ರೈಲು ನಿಲ್ದಾಣಗಳ ಸಂಪರ್ಕಕ್ಕೆ ಬೈಕ್ ಟ್ಯಾಕ್ಸಿ ಬಳಕೆಗೆ ಅವಕಾಶ ನೀಡಿದರೆ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ADVERTISEMENT

‘ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಸಭೆಯ ನಿರ್ಣಯವನ್ನು ಲಿಖಿತವಾಗಿ ದಾಖಲಿಸಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಹೇಮಂತಕುಮಾರ್ ತಿಳಿಸಿದರು.

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡುವುದಕ್ಕೆ ಆಟೊರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರು ವಿರೋಧ ವ್ಯಕ್ತವಾಗಿತ್ತು. ಆದರೆ, ಟ್ಯಾಕ್ಸಿ ಮತ್ತು ಆಟೋರಿಕ್ಷಾ ಪ್ರಯಾಣ ದರ ಹೆಚ್ಚಾಗಿರುವುದು ಮೆಟ್ರೊ ಮತ್ತು ಬಸ್ ನಿಲ್ದಾಣಗಳಿಂದ ಕೊನೆಯ ತಾಣಗಳನ್ನು ತಲುಪಲು ಜನ ತೊಂದರೆ ಅನುಭವಿಸುತ್ತಿದ್ದಾರೆ. ಬೈಕ್ ಟ್ಯಾಕ್ಸಿಗಳು ಈ ಸಮಸ್ಯೆಗಳಿಗೆ ಪರಿಹಾರವಾಗಲಿವೆ ಎಂಬುದು ಸಾರಿಗೆ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.

ಬೈಕ್ ಟ್ಯಾಕ್ಸಿಯಲ್ಲಿ ಮೊದಲ 5 ಕಿಲೋ ಮೀಟರ್‌ಗೆ ದರ ₹25 ನಂತರದ 10 ಕಿ.ಮೀ ಪ್ರಯಾಣಕ್ಕೆ ₹50 ದರ ನಿಗದಿಯಾಗಲಿದೆ. ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹಳದಿ ಹೆಲ್ಮೆಟ್‌ ಧರಿಸಿರಬೇಕು, ಇ-ಬೈಕ್‌ ಟ್ಯಾಕ್ಸಿ ಚಾಲನೆಗೆ 5 ವರ್ಷದ ಪರವಾನಗಿಯನ್ನು ₹5 ಸಾವಿರ ಭದ್ರತಾ ಠೇವಣಿ ಪಡೆದು ನೀಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಬೈಕ್ ಟ್ಯಾಕ್ಸಿಗೆ ಅನುಮತಿ ದೊರೆತರೆ ಎಲೆಕ್ಟ್ರಿಕ್ ಬೈಕ್‌ ಸೇವೆ ಆರಂಭಿಸಲು ಮೂರು ಖಾಸಗಿ ಸಂಸ್ಥೆಗಳು ಆಸಕ್ತಿ ವಹಿಸಿದ್ದವು.

ಮೆಟ್ರೊ: ಕುಟುಂಬಕ್ಕೆ ಒಂದೇ ಕ್ಯೂಆರ್‌ ಕೋಡ್ ಟಿಕೆಟ್

ಮೆಟ್ರೊ ರೈಲು ಪ್ರಯಾಣಕ್ಕೆ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಜಾರಿಗೆ ತಂದಿರುವ ಬಿಎಂಆರ್‌ಸಿಎಲ್, ಒಂದೇ ಕ್ಯೂಆರ್ ಕೋಡ್‌ ಪಡೆದು ಇಡೀ ಕುಟುಂಬ ಅಥವಾ 5–6 ಜನ ಪ್ರಯಾಣಿಸುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.

ಇಡೀ ಕುಟುಂಬ ಒಟ್ಟಿಗೆ ತೆರಳುವ ಸಂದರ್ಭದಲ್ಲಿ ಕೌಂಟರ್‌ಗಳಲ್ಲಿ ಅಥವಾ ಕ್ಯೂಆರ್ ಕೋಡ್‌ ಟಿಕೆಟ್‌ಗಳನ್ನೂ ಪ್ರತ್ಯೇಕವಾಗಿ ಪಡೆಯಬೇಕಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ಸರಳ ಮಾಡುವ ನಿಟ್ಟಿನಲ್ಲಿ ಐದಾರು ಜನ ಒಂದೇ ಕ್ಯೂಆರ್ ಕೋಡ್ ಬಳಸಿ ಪ್ರಯಾಣಿಸಲು ಅನುಕೂಲ ಕಲ್ಪಿಸಲು ಸಿದ್ಧತೆ ನಡೆಸಿದೆ.

ಈ ಸಂಬಂಧ ಪ್ರಯೋಗ ನಡೆಸಲಾಗುತ್ತಿದ್ದು, ಜನವರಿಯಲ್ಲಿ ಈ ವ್ಯವಸ್ಥೆ ಜಾರಿಗೆ ತರವು ಸಾಧ್ಯತೆ ಇದೆ. ವಾಟ್ಸ್‌ಆ್ಯಪ್‌ ಸಂಖ್ಯೆಗೆ(8105556677) ‘ಹಾಯ್‌’ ಎಂಬ ಸಂದೇಶ ಕಳುಹಿಸುವ ಮೂಲಕವೂ ಕ್ಯೂಆರ್ ಕೋಡ್ ಟಿಕೆಟ್ ಪಡೆಯಲು ಅವಕಾಶ ಇದೆ.

‘ಪ್ರತಿನಿತ್ಯ 10 ಸಾವಿರಕ್ಕೂ ಹೆಚ್ಚು ‌ಪ್ರಯಾಣಿಕರು ಕ್ಯೂಆರ್ ಕೋಡ್ ಟಿಕೆಟ್ ಬಳಕೆ ಮಾಡುತ್ತಿದ್ದಾರೆ. ನವೆಂಬರ್‌ನಲ್ಲಿ 2.11 ಲಕ್ಷ ಜನ ಕ್ಯೂಆರ್ ಕೋಡ್ ಟಿಕೆಟ್ ಖರೀದಿಸಿದ್ದಾರೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.