ADVERTISEMENT

10 ದ್ವಿಚಕ್ರ ವಾಹನ ಕದ್ದಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 16:13 IST
Last Updated 9 ಏಪ್ರಿಲ್ 2022, 16:13 IST
ಆರೋಪಿಯಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು
ಆರೋಪಿಯಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು   

ಬೆಂಗಳೂರು: ಸಾರ್ವಜನಿಕ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಶ್ರೀನಿವಾಸ್ ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

‘ತುಮಕೂರು ಜಿಲ್ಲೆಯ ಗುಬ್ಬಿಯ ಶ್ರೀನಿವಾಸ್, ಆಗಾಗ ನಗರಕ್ಕೆ ಬಂದು ಕೃತ್ಯ ಎಸಗುತ್ತಿದ್ದ. ಇವರಿಂದ ₹ 5.20 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಾಮಾಕ್ಷಿಪಾಳ್ಯದ ಮನೆಯೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದೂ ತಿಳಿಸಿದರು.

ADVERTISEMENT

ಗೇರ್‌ಲೆಸ್ ವಾಹನ ಮಾತ್ರ ಕಳವು: ‘ಆರೋಪಿಗೆ ಗೇರ್‌ ಹೊಂದಿರುವ ವಾಹನಗಳನ್ನು ಚಲಾಯಿಸಲು ಬರುತ್ತಿರಲಿಲ್ಲ. ಹೀಗಾಗಿ, ಗೇರ್‌ ಇಲ್ಲದ ದ್ವಿಚಕ್ರ ವಾಹನಗಳಾದ ಟಿವಿಎಸ್ ಎಕ್ಸೆಲ್ ಹಾಗೂ ಸ್ಕೂಟರ್‌ಗಳನ್ನು ಕಳ್ಳತನ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಕದ್ದ ವಾಹನಗಳನ್ನು ತಮ್ಮೂರಿನವರೆಗೂ ಚಲಾಯಿಸಿಕೊಂಡು ಹೋಗುತ್ತಿದ್ದ ಆರೋಪಿ, ಅಲ್ಲಿಯೇ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ. ಬಂದ ಹಣದಲ್ಲೇ ಜೀವನ ಸಾಗಿಸುತ್ತಿದ್ದ. ಹಣ ಖರ್ಚಾದ ಕೂಡಲೇ ಪುನಃ ನಗರಕ್ಕೆ ಬಂದು ಮತ್ತೊಂದು ವಾಹನ ಕದ್ದೊಯ್ಯುತ್ತಿದ್ದ. ವಾಹನ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.