ADVERTISEMENT

ಬೆಂಗಳೂರು: ಜೈಲಿನಲ್ಲಿ ಸ್ನೇಹ; ಹೊರಬಂದು ವಾಹನ ಕಳವು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
ಆರೋಪಿಯಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು
ಆರೋಪಿಯಿಂದ ಜಪ್ತಿ ಮಾಡಲಾದ ದ್ವಿಚಕ್ರ ವಾಹನಗಳು   

ಬೆಂಗಳೂರು: ನಗರದಲ್ಲಿ ನಡೆದಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣ ಸಂಬಂಧ ರೌಡಿ ನವೀನ್‌ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

‘ಶ್ರೀರಾಮಪುರ ಠಾಣೆಯ ರೌಡಿ ಪಟ್ಟಿಯಲ್ಲಿ ನವೀನ್ ಹೆಸರಿದೆ. ಈತ, ಇನ್ನೊಬ್ಬ ಆರೋಪಿ ಬೇಲೂರಿನ ಪ್ರಭು ಎಂಬಾತನ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ. ಆರೋಪಿಯಿಂದ ₹ 4.40 ಲಕ್ಷ ಮೌಲ್ಯದ ಮೂರು ರಾಯಲ್ ಎನ್‌ಫೀಲ್ಡ್ ಸೇರಿದಂತೆ 7 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನವೀನ್ ಹಾಗೂ ಪ್ರಭು, ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಹೋಗಿದ್ದರು. ಅಲ್ಲಿಯೇ ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟಿತ್ತು. ಒಟ್ಟಿಗೆ ಅಪರಾಧ ಕೃತ್ಯ ಎಸಗಲು ಅವರಿಬ್ಬರು ಜೈಲಿನಲ್ಲೇ ಮಾತನಾಡಿಕೊಂಡಿದ್ದರು.’

ADVERTISEMENT

‘ಜಾಮೀನು ಮೇಲೆ ಅವರಿಬ್ಬರು ಹೊರಗೆ ಬಂದಿದ್ದರು. ರಾಯಲ್ ಎನ್‌ಫೀಲ್ಡ್ ಹಾಗೂ ಇತರೆ ದ್ವಿಚಕ್ರ ವಾಹನಗಳ ಲಾಕ್‌ ಮುರಿಯುವಲ್ಲಿ ಪ್ರಭು ಪರಿಣಿತನಾಗಿದ್ದ. ನಗರದಲ್ಲಿ ಸುತ್ತಾಡಿ ವಾಹನಗಳನ್ನು ಕದ್ದು, ನವೀನ್‌ಗೆ ತಂದು ಕೊಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಕದ್ದ ವಾಹನಗಳ ವಿಲೇವಾರಿಯನ್ನು ನವೀನ್ ಮಾಡುತ್ತಿದ್ದ. ಅದರಿಂದ ಬಂದ ಹಣವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಸದ್ಯ ಪ್ರಭು ತಲೆಮರೆಸಿಕೊಂಡಿದ್ದಾನೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ಬೌನ್ಸ್ ವಾಹನ ಕದ್ದಿದ್ದ: ‘ಬೌನ್ಸ್ ಕಂಪನಿ ದ್ವಿಚಕ್ರ ವಾಹನವನ್ನೂ ಆರೋಪಿ ಕದ್ದಿದ್ದ’ ಎಂದು ಪೊಲಿಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.