ADVERTISEMENT

ರಾಜ್ಯದಲ್ಲಿ ವಾಹನ ಕದ್ದು ತಮಿಳುನಾಡಿನಲ್ಲಿ ಮಾರಾಟ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 17:00 IST
Last Updated 14 ಜನವರಿ 2021, 17:00 IST

ಬೆಂಗಳೂರು: ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪದಡಿ ಸಂಪತ್ (26) ಎಂಬುವರನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಸಂಪತ್, ಡಿಪ್ಲೊಮಾ ಮುಗಿಸಿದ್ದ. ಆದರೆ, ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ದ್ವಿಚಕ್ರ ವಾಹನ ಕಳವು ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಆತನಿಂದ ₹ 3.50 ಲಕ್ಷ ಮೌಲ್ಯದ ನಾಲ್ಕು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮನೆ ಮುಂದೆ ನಿಲ್ಲಿಸುತ್ತಿದ್ದ ವಾಹನಗಳನ್ನು ಗುರುತಿಸಿ ಆರೋಪಿ ಕೃತ್ಯ ಎಸಗುತ್ತಿದ್ದ. ಕದ್ದ ವಾಹನಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದ ಆತ, ಅಲ್ಲಿಯ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದ. ವಾಹನದಲ್ಲಿ ಇರುತ್ತಿದ್ದ ಜೆರಾಕ್ಸ್ ಪ್ರತಿಗಳನ್ನೇ ಖರೀದಿದಾರರಿಗೆ ನೀಡುತ್ತಿದ್ದ. ವಾಹನ ಮಾರಾಟದಿಂದ ಬಂದ ಹಣದಲ್ಲಿ ಮೋಜು–ಮಸ್ತಿ ಮಾಡುತ್ತಿದ್ದ’ ಎಂದೂ ಪೊಲೀಸರು ತಿಳಿಸಿದರು.

ADVERTISEMENT

‘ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ಪಲ್ಸರ್ ಬೈಕ್‌ ಕಳವಾಗಿತ್ತು. ಆ ಬಗ್ಗೆ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದಾಗ ಆರೋಪಿ ಸುಳಿವು ಸಿಕ್ಕಿತ್ತು. ಆತನ ಬಂಧನದಿಂದ ಹಲವು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳು ಬಯಲಾಗಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.