ಬೆಂಗಳೂರು: ಸಂಚಾರ ಪೊಲೀಸರ ಬಿಗಿಯಾದ ಕ್ರಮಗಳ ನಡುವೆಯೂ ಯುವಕರು ನಗರದ ಅಲ್ಲಲ್ಲಿ ವ್ಹೀಲಿ ನಡೆಸುತ್ತಿದ್ದು, ಈ ಹಾವಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ತಡರಾತ್ರಿ ಹಾಗೂ ನಸುಕಿನ ವೇಳೆ ಯುವಕರು ವ್ಹೀಲಿ ನಡೆಸುವ ಮೂಲಕ ಸಾರ್ವಜನಿಕರ ಜೀವಕ್ಕೆ ಆಪತ್ತು ತರುತ್ತಿದ್ದಾರೆ. ಅಲ್ಲದೇ ಸ್ವಯಂ ಅಪಘಾತಕ್ಕೀಡಾಗಿ ತಮ್ಮ ಜೀವಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಇಲ್ಲಿನ ವಿವಿಧ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ 37 ಸ್ಥಳಗಳಲ್ಲಿ (ಹೊರ ವರ್ತುಲ ರಸ್ತೆ, ಮೇಲ್ಸೇತುವೆ ಹಾಗೂ ಬಡಾವಣೆ ರಸ್ತೆ) ಪುಂಡರು ವ್ಹೀಲಿ ನಡೆಸುತ್ತಿದ್ದಾರೆ ಎಂಬುದನ್ನು ಗುರುತಿಸಲಾಗಿದ್ದು, ಆ ರಸ್ತೆಗಳಲ್ಲಿ ಸಂಚಾರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವ್ಹೀಲಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮದ ನಡುವೆಯೂ ಯುವಕರು ಸಂಚಾರ ಪೊಲೀಸರ ಕಣ್ತಪ್ಪಿಸಿ ವ್ಹೀಲಿ ನಡೆಸುತ್ತಿದ್ದಾರೆ.
ರಾತ್ರಿ ವೇಳೆ ಮದ್ಯ ಸೇವಿಸಿ, ಡ್ರಗ್ಸ್ ತೆಗೆದುಕೊಂಡು ಅಪಾಯಕಾರಿ ವ್ಹೀಲಿ ನಡೆಸಲಾಗುತ್ತಿದೆ. ಸ್ವಯಂ ಅಪಘಾತದಿಂದ ಸಾವು–ನೋವು ಸಹ ಸಂಭವಿಸುತ್ತಿದೆ. ಮೇಲ್ಸೇತುವೆ, ಹೊರವರ್ತುಲ ರಸ್ತೆಯಲ್ಲಿ ವ್ಹೀಲಿ ಹಾವಳಿ ಜೋರಾಗಿದೆ. ವ್ಹೀಲಿ ನಡೆಸುವ ಹೊರ ವರ್ತುಲ ರಸ್ತೆ ಹಾಗೂ ಮೇಲ್ಸೇತುವೆಯಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವಂತೆ ಗೃಹ ಸಚಿವ ಜಿ.ಪರಮೇಶ್ವರ ಅವರು ಇತ್ತೀಚೆಗೆ ಸೂಚಿಸಿದ್ದರು. ಕಳೆದ ಒಂದು ತಿಂಗಳಿಂದ ಸಂಚಾರ ಪೊಲೀಸರು ರಾತ್ರಿ ಗಸ್ತು ತೀವ್ರಗೊಳಿಸಿದ್ದಾರೆ.
ವ್ಹೀಲಿ ತಡೆಗೆ ಕಾರ್ಯಪಡೆ ರಚಿಸುವುದಾಗಿಯೂ ರಾಜ್ಯ ಸರ್ಕಾರ ಘೋಷಿಸಿದ್ದು ಅದರ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಳವು ಮಾಡಿದ್ದ ವಾಹನಗಳ ಬಳಕೆ: ‘ವ್ಹೀಲಿ ನಡೆಸಲು ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಯುವಕರು ಬಳಕೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ವಾಹನದ ನೋಂದಣಿ ಫಲಕವನ್ನು ಮರೆಮಾಚಿ ಹಾಗೂ ನಕಲಿ ಸಂಖ್ಯೆ ಅಳವಡಿಸಿಕೊಂಡು ವ್ಹೀಲಿ ನಡೆಸುತ್ತಿರುವುದು ಕಂಡುಬಂದಿದೆ’ ಎಂದು ಮೂಲಗಳು ಹೇಳಿವೆ.
‘ಕಳೆದ ಮೂರುವರೆ ವರ್ಷಗಳಲ್ಲಿ ವ್ಹೀಲಿ ನಡೆಸುತ್ತಿದ್ದವರನ್ನು ಪತ್ತೆಹಚ್ಚಿ ಒಟ್ಟು 1,260 ವಾಹನ ನೋಂದಣಿ ಪ್ರಮಾಣ ಪತ್ರ (ಆರ್.ಸಿ) ಹಾಗೂ ಚಾಲನಾ ಪರವಾನಗಿ (ಡಿ.ಎಲ್) ರದ್ದು ಪಡಿಸುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ, 800ಕ್ಕೂ ಹೆಚ್ಚು ಆರ್‌ಸಿ ಹಾಗೂ ಡಿಎಲ್ ಅಮಾನತು ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.
ಪೋಷಕರ ವಿರುದ್ಧವೂ ಕ್ರಮ: ವ್ಹೀಲಿ ನಡೆಸುತ್ತಿದ್ದವರು ಒಂದು ವೇಳೆ ಬಾಲಕರಾಗಿದ್ದರೆ ಪೋಷಕರ ವಿರುದ್ಧ ಮೋಟಾರು ವಾಹನ ಕಾಯ್ದೆ (ಐಎಂವಿ) ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ವಾಹನಗಳನ್ನೂ ವಶಕ್ಕೆ ಪಡೆದುಕೊಂಡು ಒಂದು ವರ್ಷದ ಮಟ್ಟಿಗೆ ಆರ್.ಸಿ ರದ್ದು ಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವ್ಹೀಲಿ ನಡೆಸಿದ ಬಾಲಕರಿಗೆ 25 ವರ್ಷ ದಾಟುವವರೆಗೂ ಚಾಲನಾ ಪರವಾನಗಿ ನೀಡದಂತೆಯೂ ಸಂಬಂಧಪಟ್ಟ ಆರ್‌ಟಿಒ ಕಚೇರಿಗೆ ವರದಿ ಸಲ್ಲಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ರಸ್ತೆಬದಿಯಲ್ಲಿ ನಿಂತಿವರಿಗೂ ದಿಗಿಲು: ಒಂದೇ ಚಕ್ರದಲ್ಲಿ ಬೈಕ್ ಚಾಲನೆ ಮಾಡುತ್ತಾ ರಸ್ತೆಬದಿಯಲ್ಲಿ ನಿಂತವರ ಹಾಗೂ ವಾಹನ ಚಾಲಕರಿಗೆ ದಿಗಿಲು ಹುಟ್ಟಿಸಲಾಗುತ್ತಿದೆ. ವ್ಹೀಲಿ ನಡೆಸುವ ಪುಂಡರಿಂದಾಗಿ ಅಮಾಯಕರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಇದೆ. ವ್ಹೀಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ–ಕಾಲೇಜಿಗೂ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ವ್ಹೀಲಿಯಿಂದ ಆಗುವ ಅನಾಹುತಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ವರ್ಷ 1.74 ಲಕ್ಷ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು ಈ ಕಾರ್ಯಾಚರಣೆಯು ನಿರಂತರವಾಗಿ ಮುಂದುವರಿಯಲಿದೆ–ಕಾರ್ತಿಕ್ ರೆಡ್ಡಿ ಜಂಟಿ ಪೊಲೀಸ್ ಕಮಿಷನರ್ ಸಂಚಾರ ವಿಭಾಗ
ಆರೋಪಿಗಳು ವ್ಹೀಲಿ ನಡೆಸುತ್ತಿರುವ ಪ್ರಮುಖ ರಸ್ತೆ ಹಾಗೂ ಪ್ರದೇಶಗಳು
* ಬಟ್ಟರಹಳ್ಳಿ ಮೆಡಹಳ್ಳಿಯ ಒಎಂ ರಸ್ತೆ ಹಾಗೂ ಆರ್‌ಎಂ ನಗರದ ಹೊರ ವರ್ತುಲ ರಸ್ತೆ (ಕೆ.ಆರ್. ಪುರ ಸಂಚಾರ ಠಾಣೆ)* ವರ್ತೂರು ರಸ್ತೆ (ವಿಮಾನಪುರ) ಐಟಿಪಿಎಲ್ ರಸ್ತೆ (ಎಚ್ಎಎಲ್ ಏರ್ ಪೋರ್ಟ್ ಸಂಚಾರ ಠಾಣೆ)* ಐಟಿಪಿಎಲ್ ರಸ್ತೆ (ವೈಟ್‌ಫೀಲ್ಡ್)* ಮಹದೇವಪುರ ರಿಂಗ್ ರಸ್ತೆ (ಮಹದೇವಪುರ ಸಂಚಾರ ಠಾಣೆ)* ನೈಸ್ ರಸ್ತೆ ಹಮ್ಮಿಗೆಪುರ ಕೊಮ್ಮಘಟ್ಟ (ಕೆಂಗೇರಿ) * ನಾಯಂಡಹಳ್ಳಿ (ಬ್ಯಾಟರಾಯನಪುರ) * ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮೇಲ್ಸೇತುವೆ (ಮಾಗಡಿ ರಸ್ತೆ ಸಂಚಾರ ಠಾಣೆ)* ಕಮಲಾನಗರ ಒಂದನೇ ಮುಖ್ಯರಸ್ತೆ (ವಿಜಯನಗರ) * ಸುಮನಹಳ್ಳಿ (ಹೊರವರ್ತುಲ ರಸ್ತೆ) (ಕಾಮಾಕ್ಷಿಪಾಳ್ಯ) * ನಾಗರಬಾವಿ ರಿಂಗ್ ರಸ್ತೆ ವಿಶ್ವೇಶ್ವರಯ್ಯ ಲೇಔಟ್ 100 ಅಡಿ ರಸ್ತೆ (ಜ್ಞಾನಭಾರತಿ) * ಹೊಸೂರು ಮುಖ್ಯರಸ್ತೆ (ಎಚ್‌ಎಸ್‌ಆರ್ ಲೇಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ) * ಸರ್ಜಾಪುರ ರಸ್ತೆ (ಬೆಳ್ಳಂದೂರು) * ಬನ್ನೇರುಘಟ್ಟ ರಸ್ತೆ (ಜೆ.ಪಿ. ನಗರ)* ಚನ್ನಮ್ಮ ಮೇಲ್ಸೇತುವೆ (ಬನಶಂಕರಿ) * ಅಂಜಾನಪುರ 80 ಅಡಿ ರಸ್ತೆ (ತಲಘಟ್ಟಪುರ)* ವಾಣಿವಿಲಾಸ ರಸ್ತೆ (ಬಸವನಗುಡಿ) * ಮದರ್ ತೆರೇಸಾ ರಸ್ತೆ (ಅಶೋಕನಗರ) * ರಾಮಯ್ಯ 80 ಅಡಿ ರಸ್ತೆ (ಸದಾಶಿವನಗರ)* ರಿಂಗ್ ರಸ್ತೆ (ರಾಜಾಜಿನಗರ)* ತುಮಕೂರು ರಸ್ತೆ (ಪೀಣ್ಯ)* ಜೆಪಿ ಪಾರ್ಕ್ ರಸ್ತೆ (ಯಶವಂತಪುರ) * ಬೆಂಗಳೂರು–ಬಳ್ಳಾರಿ ರಸ್ತೆ (ಯಲಹಂಕ ಚಿಕ್ಕಜಾಲ ಹೆಬ್ಬಾಳ ಹಾಗೂ ದೇವನಹಳ್ಳಿ) * ನಾಗವಾರ ರಸ್ತೆ (ಹೆಣ್ಣೂರು) * ಕೃಪಾ ನಿಧಿ ಕಾಲೇಜು ರಸ್ತೆ ಸರ್ಜಾಪುರ ರಸ್ತೆ (ಆಡುಗೋಡಿ ಸಂಚಾರ ಠಾಣೆ)* ಹೊಸೂರು ರಸ್ತೆ ಗಾರೇಬಾವಿಪಾಳ್ಯ ಜಂಕ್ಷನ್‌ನಿಂದ ಬೊಮ್ಮನಹಳ್ಳಿ ಜಂಕ್ಷನ್ ವರೆಗೆ (ಮಡಿವಾಳ)* ಜಯದೇವ ಜಂಕ್ಷನ್ ಈಸ್ಟ್ ಎಂಡ್ ಮುಖ್ಯರಸ್ತೆ (ಮೈಕೊಲೇಔಟ್)* ಹೊಸೂರು ರಸ್ತೆ ಸಿಂಗಸಂದ್ರ ಬಸ್ ನಿಲ್ದಾಣ ಹುಳಿಮಾವು ಲೇಕ್ ರಸ್ತೆ (ಹುಳಿಮಾವು)* ಸೇಂಟ್ ಜಾನ್ಸ್ ರಸ್ತೆ (ಫ್ರೇಜರ್ ಟೌನ್) * ಓಲ್ಡ್ ಏರ್‌ಪೋರ್ಟ್ ರಸ್ತೆ (ಹಲಸೂರು) * ಕಬ್ಬನ್ ರಸ್ತೆ (ಶಿವಾಜಿನಗರ)* ಸುರಂಜನ್ ದಾಸ್ ರಸ್ತೆ (ಜೆ.ಬಿ. ನಗರ)* ಹೊರ ವರ್ತುಲ ರಸ್ತೆ (ಬಾಣಸವಾಡಿ)* ನಾಗವಾರ ರಸ್ತೆ ಹೆಣ್ಣೂರು ಜಂಕ್ಷನ್ (ಕೆ.ಜಿ. ಹಳ್ಳಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.