ADVERTISEMENT

ರೋಗಾಣು ಪತ್ತೆಗೆ ‘ಬಯೊ ಸೆನ್ಸಾರ್‌’

ರೋಗ ಹಬ್ಬುವಿಕೆ ತಡೆಯಲು ಸಹಕಾರಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 19:58 IST
Last Updated 18 ನವೆಂಬರ್ 2018, 19:58 IST
ಪ್ರೊ.ಅನಿತಾ ಪೀಟರ್‌
ಪ್ರೊ.ಅನಿತಾ ಪೀಟರ್‌   

ಬೆಂಗಳೂರು: ಪಪ್ಪಾಯಿ ಮತ್ತು ಏಲಕ್ಕಿಯಲ್ಲಿ ಕಂಡು ಬರುವ ರೋಗಾಣುಗಳನ್ನು ಪತ್ತೆಹಚ್ಚಿ, ಪ್ರಾಥಮಿಕ ಹಂತದಲ್ಲಿಯೇ ಪರಿಹಾರ ಕಂಡುಕೊಳ್ಳಲು ನೆರವಾಗುವ ನವೀನ ಬಯೊ ಸೆನ್ಸಾರ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಸ್ಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರೊ.ಅನಿತಾ ಪೀಟರ್‌ ತಿಳಿಸಿದರು.

ಕೃಷಿ ಮೇಳ‘ದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ‘ರೋಗಾಣುಗಳು ಒಂದರಿಂದ, ಇನ್ನೊಂದು ಸಸಿಗಳಿಗೆ ಹರಡುವ ಮೂಲಕ ಇಡೀ ಬೆಳೆಯನ್ನೇ ನಾಶ ಮಾಡುತ್ತವೆ. ಇದರಿಂದ ಇಳುವರಿಯ ಪ್ರಮಾಣವು ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.

‘ಅಂಗಾಂಶ ಕೃಷಿ ಅಥವಾ ನರ್ಸರಿಗಳಲ್ಲಿ ರೈತರಿಗೆ ಸಸಿಗಳನ್ನು ಕೊಡುವುದಕ್ಕೂ ಮೊದಲೇ ರೋಗಾಣು ಇರುವಿಕೆಯ ಕುರಿತು ಪರೀಕ್ಷೆ ಮಾಡಲು ಈ ತಂತ್ರಜ್ಞಾನ ನೆರವಾಗಲಿದೆ. ಪ್ರಾಥಮಿಕ ಹಂತದಲ್ಲಿಯೇ ರೋಗರಹಿತ ಸಸಿ ವಿತರಣೆಯಲ್ಲಿ ಮಹತ್ವದ ಪಾತ್ರವಹಿಸಲಿದೆ’ ಎಂದು ತಿಳಿಸಿದರು.

ADVERTISEMENT

‘ರೋಗಾಣು ಪತ್ತೆಗೆ ಕಿಟ್‌ಗಳನ್ನು ತಯಾರಿಸಲಾಗಿದೆ. ಸಸಿಯನ್ನು ಬಾಧಿಸುವ ಕೀಟದ ಒಂದು ಸಾರವನ್ನು ಮತ್ತು ಸಸಿಯ ಒಂದು ಅಂಶವನ್ನು ಬಯೊಸೆನ್ಸಾರ್‌ ಮಾಪಕದಲ್ಲಿ ಹಾಕಲಾಗುತ್ತದೆ. ನಂತರ ವಿದ್ಯುತ್‌ ತರಂಗಗಳನ್ನು ಸಸಿಗಳ ಮೇಲೆ ಹರಿಬಿಟ್ಟು, ಸಸಿಯಲ್ಲಿರುವ ರೋಗಾಣು ಅಂಶಕ್ಕೂ ಮಾಪಕದಲ್ಲಿರುವ ಅಂಶಕ್ಕೂ ಹೊಂದಿಸಿ ನೋಡಲಾಗುತ್ತದೆ. ಮಾಪನದಲ್ಲಿ ದೀಪವು ಬೆಳಗಿದಲ್ಲಿ ರೋಗಾಣು ಇರುವಿಕೆ ಖಚಿತವಾಗುತ್ತದೆ’ ಎಂದು ಅವರು ವಿವರಿಸಿದರು.

‘ರೋಗಾಣು ಇರುವ ಸಸಿಯನ್ನು ಮಾತ್ರ ತೋಟದಿಂದ ಕಿತ್ತು ತೆಗೆಯಲು ಈ ತಂತ್ರಜ್ಞಾನದ ನೆರವಿಗೆ ಬರುತ್ತದೆ. ಇತರ ಸಸಿಗಳಿಗೂ ರೋಗಾಣು ಹರಡುವುದನ್ನು ತಡೆಗಟ್ಟಬಹುದು. ಇಳುವರಿಯ ಪ್ರಮಾಣವನ್ನೂ ಹೆಚ್ಚಿಸಬಹುದು’ ಎಂದು ಅವರು ತಿಳಿಸಿದರು.

‘ರೋಗಾಣುಗಳ ಬಾಧೆಯಿಂದ ಬೆಳೆಗಳ ಗುಣಮಟ್ಟ ಹಾಳಾಗುತ್ತದೆ. ಈ ವಿಧಾನ ಅನುಸರಿಸುವುದರಿಂದ ಗುಣಮಟ್ಟವನ್ನೂ ಕಾಯ್ದುಕೊಂಡು, ಉತ್ತಮ ಆದಾಯ ಗಳಿಸಬಹುದಾಗಿದೆ. ಇತರೇ ಬೆಳೆಗಳಿಗೂ ಈ ತಂತ್ರಜ್ಞಾನ ಬಳಸುವ ಕುರಿತು ಪರೀಕ್ಷೆ ನಡೆಸುತ್ತಿದ್ದೇವೆ. ಈ ಸಂಶೋಧನೆಗೆ ಸರ್ಕಾರದ ನೆರವು ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.