ADVERTISEMENT

ಪಂಜರದಲ್ಲಿ ಪ್ರಾಣಿ--–ಪಕ್ಷಿಗಳ ಸಂಕಟ- ಅನಧಿಕೃತ ಮಾರಾಟಗಾರರ ಹಾವಳಿ

ಅನಧಿಕೃತ ಮಾರಾಟಗಾರರ ಹಾವಳಿ l ನಿಯಮ ಉಲ್ಲಂಘಿಸಿದ 25 ಮಳಿಗೆಗಳ ಬಂದ್‌

ಅದಿತ್ಯ ಕೆ.ಎ.
Published 5 ಫೆಬ್ರುವರಿ 2023, 21:41 IST
Last Updated 5 ಫೆಬ್ರುವರಿ 2023, 21:41 IST
ಗಿಣಿರಾಮ
ಗಿಣಿರಾಮ   

ಬೆಂಗಳೂರು: ನಗರದಲ್ಲಿ ಸಾಕುಪ್ರಾಣಿ ಗಳ ಮಾರಾಟ ದೊಡ್ಡ ಉದ್ದಿಮೆಯಾಗಿ ಬೆಳೆದಿದ್ದು, ಅನಧಿಕೃತವಾಗಿ ನೂರಾರು ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ.

ಈ ಮಳಿಗೆಗಳಲ್ಲಿ ಸಾಕುಪ್ರಾಣಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ನೀರು, ಗಾಳಿ ಹಾಗೂ ಆಹಾರದ ವ್ಯವಸ್ಥೆ ಯಿಲ್ಲದೇ ಪ್ರಾಣಿ, ಪಕ್ಷಿಗಳು ಸಂಕಟ ಪಡುತ್ತಿವೆ. ಮಾರಾಟಗಾರರು ಸಾಕುಪ್ರಾಣಿಗಳನ್ನು ಬರೀ ಮಾರಾಟಕ್ಕೆ ಸೀಮಿತ ಮಾಡಿಕೊಂಡಿದ್ದು ಪ್ರಾಣಿ ಹಾಗೂ ಪಕ್ಷಿಪ್ರಿಯರ ಆತಂಕ ಹೆಚ್ಚಿಸಿದೆ.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ, ನಗರ ಪೊಲೀಸರು ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಪ್ರಾಣಿ ಕಲ್ಯಾಣ ಮಂಡಳಿ ಕಾರ್ಯಕರ್ತರು ಜಂಟಿಯಾಗಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಉಲ್ಲಂಘಿಸಿ ಮಾರಾಟ ಹಾಗೂ ಸಂತಾನೋತ್ಪತ್ತಿ ನಡೆಸುತ್ತಿರುವುದು ಪತ್ತೆಯಾಗಿದೆ.

ADVERTISEMENT

ಅಧಿಕಾರಿಗಳ ತಂಡವುಮತ್ತೊಂದು ಸುತ್ತಿನ ದಾಳಿಗೆ ನಿರ್ಧರಿಸಿದ್ದು, ಅನಧಿಕೃತ ಮಳಿಗೆ ಹಾಗೂ ಕಾಯ್ದೆ ಉಲ್ಲಂಘಿಸುತ್ತಿರುವ ಮಾರಾಟಗಾರರ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಮೊದಲ ಹಂತದ ಕಾರ್ಯಾಚರಣೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ 16 ತಳಿಗಳ ಸಾವಿರಕ್ಕೂ ಹೆಚ್ಚು ಪ್ರಾಣಿ, ಪಕ್ಷಿಗಳ ರಕ್ಷಿಸಿ ರಕ್ಷಣಾ ಗೃಹದಲ್ಲಿ ಇಡಲಾಗಿತ್ತು.

‘ಹಣ ಗಳಿಕೆಯ ಉದ್ದೇಶದಿಂದ ಕಿರಿದಾದ ಪ್ರದೇಶದಲ್ಲಿ ಸಾಕುಪ್ರಾಣಿಗಳ ಮಾರಾಟ ಮಾಡಲಾಗುತ್ತಿದೆ. ಸ್ವಚ್ಛಂದವಾಗಿ ವಿಹರಿಸಬೇಕಿದ್ದ ಪ್ರಾಣಿ ಹಾಗೂ ಪಕ್ಷಿಗಳು ಗೂಡಿನಲ್ಲಿ ಒಂದೆಡೆ ಬಂಧಿಯಾಗಿವೆ. ಸಾಕುನಾಯಿ ಮಾರಾಟ, ಸಂತಾನೋತ್ಪತ್ತಿ ಕೇಂದ್ರ ನಡೆಸುವ 50 ಮಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದ 25 ಮಳಿಗೆ ಬಂದ್‌ ಮುಚ್ಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏನೆಲ್ಲಾ ಮಾರಾಟ?: ಆಫ್ರಿಕನ್‌ ಗಿಳಿಗಳು, ಲವ್‌ ಬರ್ಡ್ಸ್, ಗುಬ್ಬಚ್ಚಿ, ಟರ್ಕಿ, ಕಾಕ್‌ಟೈಲ್, ಕಾಜಾಣ, ಪಾರಿವಾಳಗಳು, ಮೊಲಗಳು, ಬಾತುಕೋಳಿಗಳು, ಕೋಳಿ ಗಳು, ದೇಶ ಹಾಗೂ ವಿದೇಶಿ ತಳಿಯ ಸಾಕು ನಾಯಿಗಳು, ಬೆಕ್ಕುಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗು ತ್ತಿದೆ. ಅಪಾಯಕಾರಿ ಸ್ಥಳದಲ್ಲಿಟ್ಟು ಅವುಗಳ ಜೀವಕ್ಕೆ ಕುತ್ತು ತರಲಾಗುತ್ತಿದೆ ಎಂದೂ ಅವರು ಹೇಳಿದರು.

‘ಮಾರಾಟ ಮಳಿಗೆಯಲ್ಲಿ ಯಾವುದೇ ನಿಗಾ ವಹಿಸುತ್ತಿಲ್ಲ. ಪ್ರಾಣಿಗಳಿಗೆ ಹಿಂಸೆ ನೀಡಿ ಸಂತಾನೋತ್ಪತಿ ನಡೆಸಿ ಆದಾಯ ಗಳಿಸುತ್ತಿದ್ದಾರೆ. ಅವುಗಳಿಗೂ ಜೀವವಿದೆ ಎಂದು ಪರಿಗಣಿಸುತ್ತಿಲ್ಲ. ಅನಧಿಕೃತ ಮಳಿಗೆಗಳನ್ನು ಮುಚ್ಚಿಸಬೇಕು’ ಎಂದು ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ಕೋರಮಂಗಲ ಘಟಕದ ಕಾರ್ಯದರ್ಶಿ ಸುನಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಕಿತ್ಸೆ ಕೊಡಿಸದ ಮಾಲೀಕರು

ಪಂಜರಗಳನ್ನು ಪ್ರತಿದಿನ ಸ್ವಚ್ಛ ಮಾಡಬೇಕು ಎಂಬ ನಿಯಮವಿದ್ದರೂ ಅದನ್ನು ಪಾಲಿಸುತ್ತಿಲ್ಲ. ಸಾಕಷ್ಟು ಮಳಿಗೆಗಳಲ್ಲಿ ಅವುಗಳ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಅಕ್ಕಪಕ್ಕದ ವ್ಯಾಪಾರಸ್ಥರಿಗೂ ತೊಂದರೆ ಆಗುತ್ತಿದೆ. ಸ್ವಚ್ಛವಿಲ್ಲದ ಪಂಜರಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಾಣಿಗಳನ್ನು ಕೂಡಿ ಹಾಕಲಾಗುತ್ತಿದೆ. ತಾಯಿ ನಾಯಿಯಿಂದ ನಾಯಿ ಮರಿ ಬೇರ್ಪಡಿಸಿ ಪ್ರದರ್ಶನಕ್ಕೆ ಇಡಲಾಗುತ್ತಿದೆ. ಗಾಯಗೊಂಡ ಹಾಗೂ ಅಸ್ವಸ್ಥರಾಗಿರುವ ಪ್ರಾಣಿ ಪಕ್ಷಿಗಳಿಗೆ ಚಿಕಿತ್ಸೆಯನ್ನೂ ಕೊಡಿಸದೇ ಮಾರಾಟ ನಡೆಸುತ್ತಿರುವುದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.