ADVERTISEMENT

ಕುರುಬ ವೀರ ಗೊಲ್ಲಾಳ ಜಯಂತಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 16:28 IST
Last Updated 27 ಮೇ 2025, 16:28 IST
ವಚನಜ್ಯೋತಿ ಬಳಗ ಆಯೋಜಿಸಿದ್ದ ಕುರುಬ ವೀರ ಗೊಲ್ಲಾಳ ಜಯಂತಿ ಕಾರ್ಯಕ್ರಮದಲ್ಲಿ ಗೊಲ್ಲಾಳರ ಭಾವಚಿತ್ರಕ್ಕೆ ಗಣ್ಯರು ಪುಪ್ಪಾರ್ಚನೆ ಮಾಡಿದರು
ವಚನಜ್ಯೋತಿ ಬಳಗ ಆಯೋಜಿಸಿದ್ದ ಕುರುಬ ವೀರ ಗೊಲ್ಲಾಳ ಜಯಂತಿ ಕಾರ್ಯಕ್ರಮದಲ್ಲಿ ಗೊಲ್ಲಾಳರ ಭಾವಚಿತ್ರಕ್ಕೆ ಗಣ್ಯರು ಪುಪ್ಪಾರ್ಚನೆ ಮಾಡಿದರು   

ಬೆಂಗಳೂರು: ‘ಕಾಯಕವೇ ಕೈಲಾಸವೆಂದು ಮನದಟ್ಟು ಮಾಡಿಕೊಂಡು ಕಾಯಕದಲ್ಲಿಯೇ ದೇವರನ್ನು ಕಂಡುಕೊಂಡವರು ವಚನಕಾರರು’ ಎಂದು ಕವಯಿತ್ರಿ ವಿದ್ಯಾಶ್ರೀ ಹರಕೂಡೆ ಹೇಳಿದರು

ವಚನಜ್ಯೋತಿ ಬಳಗ ಮಂಗಳವಾರ ಆಯೋಜಿಸಿದ್ದ ‘ಕುರುಬ ವೀರ ಗೊಲ್ಲಾಳ ಜಯಂತಿ’ಯಲ್ಲಿ ಉಪನ್ಯಾಸ ನೀಡಿದ ಅವರು, ‘ಮುಗ್ಧತೆಯ ಪ್ರತಿರೂಪವಾಗಿದ್ದ ಗೊಲ್ಲಾಳ ಕಲ್ಯಾಣದಲ್ಲಿ ಬಸವಣ್ಣನವರ ಜೊತೆಗೂಡಿ ಹಂಚಿಕೊಂಡಿರುವ ಅನುಭಾವಗಳಲ್ಲಿ ತಮ್ಮ ಕುರಿ ಕಾಯುವ ಕಾಯಕವನ್ನೇ ವಸ್ತುವಾಗಿರಿಸಿಕೊಂಡಿದ್ದಾರೆ. ಸಿಕ್ಕಿರುವ ಹತ್ತು ವಚನಗಳಲ್ಲಿ ಬೆಡಗಿನ ಬಗೆಯಿದ್ದು ವಿಸ್ಮಯವನ್ನುಂಟು ಮಾಡುತ್ತದೆ ಎಂದು ಬಣ್ಣಿಸಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಬೆಂಗಳೂರಿನಲ್ಲಿ ಕುರುಬ ಗೊಲ್ಲಾಳರ ಪರಿಚಯವಿಲ್ಲ ಹೆಚ್ಚಿಲ್ಲ. ಈ ನೆಲದ ವಚನಕಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಗೊಲ್ಲಾಳರ ಜೀವನ ಚಿತ್ರದೊಂದಿಗೆ ಅವರ ಅನುಭಾವದ ವಚನಗಳ‌ ಗಾಯನ ಮತ್ತು ಅರ್ಥೈಸುವಿಕೆಯನ್ನು ನಡೆಸಲಾಗಿದೆ. ವಚನಜ್ಯೋತಿ ಬಳಗವು ವಚನ ಚಳವಳಿಯ ಎಲ್ಲರನ್ನೂ ಜನಸಾಮಾನ್ಯರಿಗೆ ನೆನಪಿಸುವ - ಪರಿಚಯಿಸುವ ಕಾರ್ಯದಲ್ಲಿದೆ’ ಎಂದು ತಿಳಿಸಿದರು.

ADVERTISEMENT

ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹೊನ್ನಲಿಂಗಯ್ಯ ಮಾತನಾಡಿ, ‘ಸಮಕಾಲೀನ ಸಮಸ್ಯೆಗಳಿಗೂ ವಚನಕಾರರಲ್ಲಿ ಉತ್ತರವಿದ್ದು, ಕುರುಬ ಗೊಲ್ಲಾಳೇಶರ ಜಾತ್ರೆಯನ್ನು ವಿಜಯಪುರದ ಗೊಲಗೇರಿಯಲ್ಲಿ ವಿಜೃಂಭಣೆಯಿಂದ ಆಚರಿಸುತ್ತಿದೆ. ರಾಜಧಾನಿಯಲ್ಲಿಯೂ ಗೊಲ್ಲಾಳರನ್ನು ನೆನೆಸುತ್ತಿರುವುದು ಗುಣಾತ್ಮಕ ನಡೆ’ ಎಂದು ಬಣ್ಣಿಸಿದರು.

ಜನಪದ ಗಾಯಕ ಬಸವರಾಜ ಅಜ್ಜಪ್ಪರನ್ನು ಸನ್ಮಾನಿಸಲಾಯಿತು. ವಚನ ಕಲಿಕಾ ತರಗತಿಯ ವಿದ್ಯಾರ್ಥಿಗಳು ಮತ್ತು ಮುಕ್ತಾಯಕ್ಕ ಬಳಗದವರು ವಚನ ಗಾಯನ ಮಾಡಿದರು. ಗಾಯಕ ದೇವೇಂದ್ರಕುಮಾರ ಪತ್ತಾರ್, ಪೂರ್ಣಚಂದ್ರ ಫೌಂಡೇಷನ್ನಿನ ಚನ್ನಕೇಶವಮೂರ್ತಿ, ಗಾಯಕಿಯರಾದ ಮೀನಾಕ್ಷಿ ಮೇಟಿ, ಜಾನಕಿ, ವಚನಜ್ಯೋತಿ ಬಳಗದ ರಾಜಾ ಗುರುಪ್ರಸಾದ್, ಪ್ರಭು, ಸಂಗಮೇಶ್, ಅನಿಲ್‌, ವಿಜಯನಗರ ಕಾಂಗ್ರೆಸ್ ಮುಖಂಡ ನಂಜಪ್ಪ, ನಾಗರಬಾವಿ ಬಸವ ಬಳಗದ ಶಿವನಗೌಡ ಪಾಟೀಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.