ADVERTISEMENT

ಜಲಮಂಡಳಿಗೆ ಬಿಐಎಸ್‌ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 16:24 IST
Last Updated 13 ಮಾರ್ಚ್ 2025, 16:24 IST
ಜಲಮಂಡಳಿ 
ಜಲಮಂಡಳಿ    

ಬೆಂಗಳೂರು: ಬೆಂಗಳೂರು ಜಲಮಂಡಳಿಯ ಕುಡಿಯುವ ನೀರು ಸರಬರಾಜು ನಿರ್ವಹಣಾ ವ್ಯವಸ್ಥೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನಿಂದ (ಬಿಐಎಸ್) ಪ್ರಮಾಣಪತ್ರ ಸಂದಿದೆ. 

ನೀರು ಸರಬರಾಜು ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿರುವ ಅಂತರರಾಷ್ಟ್ರೀಯ ಮಾನದಂಡಗಳನ್ನು ಪರಿಶೀಲನೆ ನಡೆಸಲಾಗಿತ್ತು. ಆರು ತಿಂಗಳಿನಿಂದ ವಿವಿಧ ಹಂತಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಎಲ್ಲ ಪರೀಕ್ಷೆ, ಪರಿಶೀಲನೆಗಳಲ್ಲಿ ಉತ್ತಮ ಗುಣಮಟ್ಟ ಕಂಡುಬಂದಿದ್ದರಿಂದ ಬಿಐಎಸ್ ಪ್ರಮಾಣ ನೀಡಿದೆ.

ಬಿಐಎಸ್ ಪ್ರಮಾಣೀಕರಣದ ವ್ಯಾಪ್ತಿಯು ಜಲಮಂಡಳಿಯ ಸಮಗ್ರ ನೀರಿನ ನಿರ್ವಹಣಾ ಕಾರ್ಯಾಚರಣೆಗಳನ್ನು ಒಳಗೊಂಡಿದೆ. ನೀರಿನ ಸಂಸ್ಕರಣೆ, ಸಂಗ್ರಹಣೆ, ಪಂಪಿಂಗ್, ಜಲಮಂಡಳಿ ವ್ಯಾಪ್ತಿಯಲ್ಲಿ ಪೈಪ್ ಸಂಪರ್ಕಜಾಲದ ಮೂಲಕ ವಿತರಣೆ, ನಿರ್ವಹಣೆ, ಮೀಟರಿಂಗ್ ಮತ್ತು ಗ್ರಾಹಕರಿಗೆ ಬಿಲ್ಲಿಂಗ್ ಒಳಗೊಂಡಿದೆ.

ADVERTISEMENT

ಈ ಕುರಿತಂತೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನಗರದ ಜನರಿಗೆ ಶುದ್ಧ ಮತ್ತು ಸುರಕ್ಷಿತ ನೀರು ಒದಗಿಸುವುದು ನಮ್ಮ ಆದ್ಯತೆ. ಬಿಐಎಸ್ ಪ್ರಮಾಣೀಕರಣ ಪಡೆದ ದೇಶದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಲ ಮಂಡಳಿಯದ್ದಾಗಿರುವುದು ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು.

‘ನಾವು ನೀರಿನ ಗುಣಮಟ್ಟ ಮತ್ತು ಸುರಕ್ಷತೆಗೆ ವಿಶೇಷ ಮಾನದಂಡ ಹೊಂದಿದ್ದೇವೆ. ಇದು ಸಾರ್ವಜನಿಕ ಸೇವೆಗಳು ಮತ್ತು ನಗರ ಸುಸ್ಥಿರತೆಯಲ್ಲಿ ಅತ್ಯುನ್ನತ ಮಾನದಂಡಗಳನ್ನು ಅಳವಡಿಸಿಕೊಳ್ಳುವ ನಗರವಾಗಿ ಬ್ರ್ಯಾಂಡ್ ಬೆಂಗಳೂರು ಉಪಕ್ರಮಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ’ ಎಂದು ತಿಳಿಸಿದರು.

‘ಬೆಂಗಳೂರಿನ ಲಕ್ಷಾಂತರ ನಿವಾಸಿಗಳಿಗೆ ಸೇವೆ ಸಲ್ಲಿಸುತ್ತಿರುವ ಜಲಮಡಳಿಯ ಕಾರ್ಯನಿರ್ವಹಣೆಗೆ ಬಿಐಎಸ್ ಪ್ರಮಾಣಪತ್ರ ಲಭಿಸಿರುವುದು ಮಹತ್ವದ ಮೈಲಿಗಲ್ಲು’ ಎಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್ ಮನೋಹರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.