ADVERTISEMENT

ಬಿಟ್ ಕಾಯಿನ್ ಅಕ್ರಮ ಪ್ರಕರಣದ ಸಾಕ್ಷ್ಯ ನಾಶ: ವಿಚಾರಣೆಗೆ ಹಾಜರಾದ ಡಿವೈಎಸ್ಪಿ

​ಪ್ರಜಾವಾಣಿ ವಾರ್ತೆ
Published 8 ಮೇ 2024, 16:28 IST
Last Updated 8 ಮೇ 2024, 16:28 IST
<div class="paragraphs"><p>ಬಿಟ್ ಕಾಯಿನ್(ಪ್ರಾತಿನಿಧಿಕ ಚಿತ್ರ)</p></div>

ಬಿಟ್ ಕಾಯಿನ್(ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಬಿಟ್ ಕಾಯಿನ್ ಅಕ್ರಮ ಪ್ರಕರಣದ ಸಾಕ್ಷ್ಯ ನಾಶಪಡಿಸಿದ್ದ ಆರೋಪದಡಿ ಸಿಐಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಡಿವೈಎಸ್ಪಿ ಶ್ರೀಧರ್ ಪೂಜಾರ ಅವರು ಬುಧವಾರ ಹಾಜರಾದರು.

ಪ್ರಕರಣ ದಾಖಲಾದ ನಂತರ ಕೆಲವು ಬಾರಿ ವಿಚಾರಣೆಗೆ ಹಾಜರಾಗಿದ್ದ ಪೂಜಾರ, ನಂತರ ತಲೆಮರೆಸಿಕೊಂಡಿದ್ದರು. ಅವರ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು. ನ್ಯಾಯಾಲಯದ ಮೆಟ್ಟಿಲೇರಿದ್ದ ಅವರು, ಜಾಮೀನು ಪಡೆದುಕೊಂಡಿದ್ದರು. ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ಜಾಮೀನಿಗೆ ಷರತ್ತು ವಿಧಿಸಲಾಗಿತ್ತು.

ADVERTISEMENT

ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಸಿಐಡಿ ಡಿವೈಎಸ್ಪಿ ಬಾಲರಾಜು ಅವರ ಕೊಠಡಿಗೆ ಶ್ರೀಧರ್ ಪೂಜಾರ ಹಾಜರಾಗಿದ್ದರು. ಆರೋಗ್ಯ ಸಮಸ್ಯೆಯಿಂದಾಗಿ ಬಾಲರಾಜು ರಜೆ ಪಡೆದಿದ್ದರು. ಪೂಜಾರ ಅವರಿಂದ ಸಹಿ ಪಡೆದುಕೊಂಡ ಕಚೇರಿ ಸಿಬ್ಬಂದಿ, ಕೆಲ ದಿನಗಳ ನಂತರ ಪುನಃ ವಿಚಾರಣೆಗೆ ಬರುವಂತೆ ಹೇಳಿ ವಾಪಸು ಕಳುಹಿಸಿದ್ದಾರೆಂದು ಗೊತ್ತಾಗಿದೆ.

‘ಶ್ರೀಧರ್ ಪೂಜಾರ ಅವರು ಈ ಹಿಂದೆ ಬೆಂಗಳೂರು ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು. ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಅವರ ವಿರುದ್ಧ, ಸಾಕ್ಷ್ಯ ನಾಶಪಡಿಸಿದ್ದರೆಂಬ ಆರೋಪವಿದೆ. ಈ ಸಂಬಂಧ ಸಿಐಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್ ಡಿ.ಎಂ. ಪ್ರಶಾಂತ್‌ ಬಾಬು ಹಾಗೂ ಸೈಬರ್ ತಜ್ಞ ಕೆ.ಎಸ್. ಸಂತೋಷ್‌ಕುಮಾರ್‌ನನ್ನು ಈಗಾಗಲೇ ಬಂಧಿಸಲಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಶ್ರೀಧರ್ ಪೂಜಾರ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಅವರು ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದೀಗ, ಅವರಿಗೆ ಜಾಮೀನು ಸಿಕ್ಕಿದೆ. ಅವರ ವಿಚಾರಣೆ ಮುಂದುವರಿಸಲಾಗುವುದು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.