ADVERTISEMENT

ಮರ್ಯಾದೆಗೇಡು ಹತ್ಯೆ ಶಂಕೆ; ಡಿಜಿಪಿಗೆ ಬಿಜೆಪಿ ದೂರು

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:29 IST
Last Updated 10 ಜನವರಿ 2019, 20:29 IST

ಬೆಂಗಳೂರು: ‘ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಶಾಸಕ ಕೆ.ಗೋಪಾಲಯ್ಯ ಅವರ ಸೋದರ ಬಸವರಾಜ್ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮರ್ಯಾದೆಗೇಡು ಹತ್ಯೆ ಆರೋಪ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಬೇಕು’ ಎಂದು ಒತ್ತಾಯಿಸಿ ಬಿಜೆಪಿ ನಾಯಕರು ಗುರುವಾರ ಡಿಜಿಪಿ ನೀಲಮಣಿ ರಾಜು ಅವರಿಗೆ ಮನವಿ ಸಲ್ಲಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಡಿಜಿಪಿ ಅವರನ್ನು ಭೇಟಿಯಾದ ನಿಯೋಗ, ‘ಕಾಮಾಕ್ಷಿಪಾಳ್ಯದ ಮನು ಎಂಬ ಹುಡುಗ, ಕೆಲ ದಿನಗಳ ಹಿಂದೆ ಗೋಪಾಲಯ್ಯ ಅವರ ತಮ್ಮನ ಮಗಳನ್ನು ಪ್ರೇಮ ವಿವಾಹವಾಗಿದ್ದ. ಆತನನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದು ಮರ್ಯಾದೆಗೇಡು ಹತ್ಯೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ, ಪ್ರಾಮಾಣಿಕ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿತು.

‘ಒಂದು ತಿಂಗಳಿನಿಂದ ತುಮಕೂರಿನಲ್ಲಿ ನೆಲೆಸಿದ್ದ ಆ ನವ ದಂಪತಿ, ತಮಗೆ ಜೀವಭಯ ಇರುವುದಾಗಿ ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿಕೊಂಡಿದ್ದರು. ಅವರು ಆತಂಕ ವ್ಯಕ್ತಪಡಿಸಿದ್ದ ರೀತಿಯಲ್ಲೇ ಮನು ಭೀಕರವಾಗಿ ಕೊಲೆಯಾಗಿದ್ದಾರೆ. ಅದರ ಬೆನ್ನಲ್ಲೇ ಮನು ಪತ್ನಿಯೂ ನಿಗೂಢವಾಗಿ ಕಾಣೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.’

ADVERTISEMENT

‘ತಮ್ಮ ಜೀವಕ್ಕೆ ಅಪಾಯವಿರುವ ಬಗ್ಗೆ ನವಜೋಡಿ ಅವಲತ್ತುಕೊಂಡರೂ ಅವರಿಗೆ ಪೊಲೀಸ್ ರಕ್ಷಣೆ ಸಿಗದಿರುವುದನ್ನು ನೋಡಿದರೆ ರಾಜಕೀಯ ಪ್ರಭಾವ ಕೆಲಸ ಮಾಡಿರುವುದು ಎದ್ದು ಕಾಣುತ್ತದೆ. ಬಸವರಾಜು ಹೆಸರು ರೌಡಿಪಟ್ಟಿಯಲ್ಲಿದ್ದರೆ, ಅವರ ಅಣ್ಣ ಆಡಳಿತ ಪಕ್ಷದ ಪ್ರಭಾವಿ ಶಾಸಕರಾಗಿರುವುದು ಈ ಸಂಶಯ ಮೂಡಲು ಕಾರಣವಾಗಿದೆ.’

‘ಪ್ರಕರಣದ ಹಿಂದಿರುವ ಪ್ರಬಲ ಕೈಗಳು ಆಪಾದಿತರನ್ನು ರಕ್ಷಿಸುವ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ, ಆದಷ್ಟು ಬೇಗ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಬೇಕು’ ಎಂದು ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.