ADVERTISEMENT

ಹಿಂದುಳಿದವರ ಮೀಸಲಾತಿ ಕಬಳಿಕೆಗೆ ಮತಾಂತರಗೊಂಡವರ ಹುನ್ನಾರ: ಬಿಜೆಪಿ ಆರೋಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 17:19 IST
Last Updated 8 ಸೆಪ್ಟೆಂಬರ್ 2025, 17:19 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಬೆಂಗಳೂರು: ‘ರಾಜ್ಯ ಸರ್ಕಾರ ಹಿಂದುಳಿದ ಜಾತಿ– ಸಮುದಾಯಗಳನ್ನು ಒಡೆಯಲು ಮತ್ತು ಮತಾಂತರಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಹಿಂದೂ ಜಾತಿಗಳನ್ನು ‘ಕ್ರೈಸ್ತ’ರೆಂದು ಗುರುತಿಸುವ ಷಡ್ಯಂತ್ರ ನಡೆಸಿದೆ’ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಹರೀಶ್ ಮತ್ತು ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಅವರ ನೇತೃತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ದಲಿತ, ಹಿಂದುಳಿದ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.

ADVERTISEMENT

‘ಕರ್ನಾಟಕ ಸರ್ಕಾರದ ಉದ್ದೇಶಿತ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳನ್ನು ಕ್ರೈಸ್ತರೆಂದು ಗುರುತಿಸುವ ಹುನ್ನಾರವನ್ನು ಎಲ್ಲ ಸಮಾಜಗಳ ಮಠಾಧೀಶರು, ಜಾತಿವಾರು ಸಂಘಟನೆಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಹಲವು ಜಾತಿಗಳ ಸಂಘಟನೆಗಳು ಪತ್ರ ಬರೆದಿವೆ. ಕ್ರೈಸ್ತ ಹಣೆಪಟ್ಟಿ ಕಟ್ಟಿರುವ ಬಗ್ಗೆ ಆಕ್ಷೇಪಣೆ ಸಲ್ಲಿಸಿವೆ. ಆದರೆ, ಸರ್ಕಾರವಾಗಲಿ, ಆಯೋಗವಾಗಲಿ ತನ್ನ ನಿಲುವು ಬದಲಿಸಿಲ್ಲ. ಹಿಂದೂ ಜಾತಿಗಳನ್ನು ಕ್ರೈಸ್ತರನ್ನಾಗಿಸುವ ಹುನ್ನಾರದಲ್ಲಿ 50ಕ್ಕೂ ಹೆಚ್ಚು ಪ್ರಮುಖ ದಲಿತ, ಹಿಂದುಳಿದ ಜಾತಿಗಳು ಸೇರಿವೆ’ ಎಂದು ತಿಳಿಸಿದರು.

‘ಕ್ರೈಸ್ತ ಹೆಸರಿನಲ್ಲಿ ಮತಾಂತರಗೊಂಡವರು ನಮ್ಮ ಜಾತಿಯೊಳಗೆ ನುಸುಳಿ ನಮ್ಮ ಪಾಲಿನ ಮೀಸಲಾತಿಯನ್ನು ಕಬಳಿಸುವ ಹುನ್ನಾರಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿದೆ. ಸರ್ಕಾರ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಕ್ಯಾಥೋಲಿಕ್‌, ಪ್ರೊಟೆಸ್ಟಂಟ್‌, ಪೆಂಟಕೋಸ್ಟ್‌ ಇತ್ಯಾದಿ ಮೂಲ ಕ್ರೈಸ್ತ ಪಂಗಡಗಳ ಹೆಸರೇ ಇಲ್ಲ. ಅವರಿಗೆ ಕೇವಲ ಕ್ರೈಸ್ತರೆಂದು ಗುರುತಿಸಿಕೊಳ್ಳಲು ಅವಕಾಶ ನೀಡಿದೆ’ ಎಂದು ಅವರು ಹೇಳಿದರು.

‘ಈ ಕುರಿತು ದಲಿತ ಮತ್ತು ಹಿಂದುಳಿದ ಸಮುದಾಯದಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ಎಲ್ಲ ಜಾತಿಗಳ ಮಠಾಧೀಶರನ್ನು ಒಳಗೊಂಡ ದುಂಡು ಮೇಜಿನ ಸಭೆಯನ್ನು ಶೀಘ್ರವೇ ಸಂಘಟಿಸಲಾಗುವುದು’ ಎಂದು ಹರೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.