ADVERTISEMENT

ಮತದಾರರ ಮಾಹಿತಿ ಸಂಗ್ರಹ: ಸಮ್ಮಿಶ್ರ ಸರ್ಕಾರವೇ ಹೊಣೆ –ರವಿಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:01 IST
Last Updated 17 ನವೆಂಬರ್ 2022, 21:01 IST

ಬೆಂಗಳೂರು: ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿ ಕೆಲಸವನ್ನು ‘ಚಿಲುಮೆ’ ಸಂಸ್ಥೆಗೆ 2018 ರಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಕೊಟ್ಟಿದ್ದು; ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಾಜ್ಯದ ಜನತೆಗೆ ವಿವರಣೆ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

ಆಗ ಇವರಿಬ್ಬರೂ ಮಾತನಾಡದೇ ಬಾಯಿ ಮುಚ್ಚಿ ಕುಳಿತಿದ್ದು ಏಕೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಟೆಂಡರ್‌ ನಡೆದಿದ್ದರಿಂದ ರಾಜೀನಾಮೆ ಕೊಡಬೇಕಾದವರು ಯಾರು? ಅಂದಿನ ಸರ್ಕಾರದ ಭಾಗವಾಗಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ನೈತಿಕ ಜವಾಬ್ದಾರಿಯನ್ನು ಹೊರಬೇಕು.ಅಷ್ಟಕ್ಕೂ ಇದರಲ್ಲೇನೂ ಅವ್ಯವಹಾರವಾಗಿಲ್ಲ. ಬಿಎಲ್‌ಒಗಳಿಗೆ ಐಡಿ ಕೊಟ್ಟ ವಿಚಾರ ಗೊತ್ತಾದೊಡನೆ ಚಿಲುಮೆ ಸಂಸ್ಥೆಗೆ ಕೊಟ್ಟಿದ್ದ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದಿದೆ ಎಂದರು.

ADVERTISEMENT

2018 ರಲ್ಲಿ ಒಂದು ದಿನಕ್ಕೆ ₹5,000 ದಂತೆ ಈ ಸಂಸ್ಥೆಗೆ ಕೊಟ್ಟಿದ್ದಾರೆ. ಬಿಬಿಎಂಪಿ ಕಡೆಯಿಂದ ಲ್ಯಾಪ್‌ಟಾಪ್‌ ಕೊಟ್ಟಿದ್ದು, ಜಾಗೃತಿ ಮೂಡಿಸಲು ಬೇಕಿದ್ದ ಕರಪತ್ರಗಳು, ಬ್ಯಾನರ್‌ಗಳು, ಶಾಮಿಯಾನ ಮೈಕ್ ವ್ಯವಸ್ಥೆಗೆ ಸ್ವಲ್ಪ ಹಣ ಖರ್ಚು ಮಾಡಿದ್ದಾರೆ. ಇದರಲ್ಲಿ ಅವ್ಯವಹಾರ ಆಗಿದ್ದರೆ, ನ್ಯೂನತೆ ಇದ್ದರೆ ಪೊಲೀಸ್‌ ಕಮಿಷನರ್‌ಗೆ ದೂರು ಕೊಡಲಾಗುತ್ತದೆ. ಅಗತ್ಯ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ವಿವರಿಸಿದರು.

ಪ್ರತಿ ವಿಷಯಕ್ಕೂ ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಬಾಲಿಶ ವರ್ತನೆ. ಇದು ಕಾಂಗ್ರೆಸ್‌ ಪಕ್ಷದ ಟೂಲ್‌ಕಿಟ್‌ನ ಒಂದು ಭಾಗ ಎಂದು ಹರಿಹಾಯ್ದರು. ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರೂ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.