ADVERTISEMENT

ಬಿಜೆಪಿ ಮುಖಂಡ ಆತ್ಮಹತ್ಯೆ: ಪತ್ನಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2022, 20:11 IST
Last Updated 24 ಮೇ 2022, 20:11 IST
   

ಬೆಂಗಳೂರು: ಹೆರೋಹಳ್ಳಿ ವಾರ್ಡ್‌ನ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು (46) ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಬ್ಯಾಡರಹಳ್ಳಿ ಪೊಲೀಸರು, ಅನಂತ ರಾಜು ಪತ್ನಿ ಬಿ.ಕೆ. ಸುಮಾ ಅವರನ್ನು ಮಂಗಳವಾರ ವಿಚಾರಣೆ ನಡೆಸಿದರು.

‘ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿ ಪತಿ ಅನಂತರಾಜು ಮೇ 12ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಪತ್ನಿ ಇತ್ತೀಚೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಕೆ.ಆರ್.ಪುರದ ನಿವಾಸಿ ರೇಖಾ ಎಂಬುವರನ್ನು ವಶಕ್ಕೆ ಪಡೆದಿದ್ದರು.

‘ಪತಿಗೆ ಕಿರುಕುಳ ನೀಡಿ, ನಾನೇ ಸಾಯಿಸುತ್ತೇನೆ’ ಎಂಬುದಾಗಿ ಪತ್ನಿ ಸುಮಾ ಹೇಳಿರುವುದಾಗಿ ಆರೋಪಿ ರೇಖಾ ಹೇಳಿಕೆ ನೀಡಿದ್ದರು. ಅದಕ್ಕೆ ಸಂಬಂಧಪಟ್ಟ ಸಂಭಾಷಣೆ ಆಡಿಯೊ ಹಾಜರುಪಡಿಸಿದ್ದರು. ಇದರಿಂದಾಗಿ ಪ್ರಕರಣ ತಿರುವು ಪಡೆದುಕೊಂಡಿದ್ದು, ಪತ್ನಿ ಮೇಲೆಯೇ ಪೊಲೀಸರಿಗೆ ಅನುಮಾನ ಬಂದಿದೆ.

ADVERTISEMENT

‘ಅನಂತರಾಜು ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ಶುರುವಾಗಿದೆ. ಎಲ್ಲ ಆಯಾಮದಲ್ಲಿ ತನಿಖೆ ನಡೆಸ ಲಾಗುತ್ತಿದ್ದು, ಸದ್ಯಕ್ಕೆ ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ. ಅನಂತರಾಜು ಬರೆದಿದ್ದಾರೆ ಎನ್ನಲಾದ ಮರಣ ಪತ್ರವನ್ನು ಪತ್ನಿ ನೀಡಿದ್ದರು. ಅದನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸಾವಿನ ಬಗ್ಗೆ ಕೆಲ ಮಾಹಿತಿ ಬೇಕಾಗಿತ್ತು. ಹೀಗಾಗಿ, ಪತ್ನಿ ಸುಮಾ ವಿಚಾರಣೆ ಮಾಡಲಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಸಂಜೆ 4 ಗಂಟೆಗೆ ಠಾಣೆಗೆ ಬಂದಿದ್ದ ಸುಮಾ ಅವರಿಂದ ಹೇಳಿಕೆ ಪಡೆದು, ವಾಪಸು ಕಳುಹಿಸಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.