ಬೆಂಗಳೂರು: ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಗಿಲು ಉಳಿಸಿ ಎಂದು ಆಗ್ರಹಿಸಿ, ನಗರದ ಬಾಗಲೂರು ಮುಖ್ಯ ರಸ್ತೆಯ ಕಂಟ್ರಿ ಕ್ಲಬ್ ಬಳಿ ಬಿಜೆಪಿಯಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಘೋಷಣೆ ಕೂಗಿದರು.
ಬೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ಅಕ್ರಮವಾಗಿ ಮನೆ ನಿರ್ಮಿಸಲಾಗಿದೆ ಎಂದು ಹೇಳಿ ಮನೆ ತೆರವು ಮಾಡಿದ್ದೇ ರಾಜ್ಯ ಸರ್ಕಾರ. ಆದರೆ, ಕೆ.ಸಿ.ವೇಣುಗೋಪಾಲ್ ಅವರು ಬೆದರಿಸಿದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಕಳೆದುಕೊಳ್ಳುವ ಭೀತಿಯಿಂದ ವಲಸಿಗರಿಗೆ ಮನೆ ಕೊಡಲು ಮುಂದಾಗಿದ್ದಾರೆ. ರಾಜ್ಯದ ಬಡವರಿಗೆ ದ್ರೋಹ ಎಸಗಲಾಗುತ್ತಿದೆ’ ಎಂದು ಕಿಡಿಕಾರಿದರು.
‘ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿ ಕಸಿದುಕೊಳ್ಳಬೇಕೆಂಬ ಕಾರಣಕ್ಕಾಗಿ ಕೆ.ಸಿ.ವೇಣುಗೋಪಾಲ್ ಮೂಲಕ ಮುಖ್ಯಮಂತ್ರಿಗೆ ಧಮ್ಕಿ ಹಾಕಿಸಿ ಅವರೂ ವಲಸಿಗರಿಗೆ ಮನೆ ಕೊಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.
‘ರಾಜ್ಯದಲ್ಲಿ 38 ಲಕ್ಷ ಮಂದಿ ಮನೆಗಾಗಿ ಅರ್ಜಿ ಹಾಕಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಹೇಳುವ ಮುಖ್ಯಮಂತ್ರಿ ಕಳೆದ ಎರಡೂವರೆ ವರ್ಷದಲ್ಲಿ ಒಂದೇ ಒಂದು ಮನೆಯನ್ನೂ ಕೊಟ್ಟಿಲ್ಲ’ ಎಂದು ದೂರಿದರು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೇರಳದವರು ಇಲ್ಲಿಗೆ ಬಂದು ವಿವರ ಪಡೆದು ಹೋಗಿದ್ದಾರೆ. ಅವರು ರಾಜ್ಯಕ್ಕೆ ಬಂದಾಗ ಇಲ್ಲಿಗೆ ಬರಲು ಅವಕಾಶ ನೀಡಿದ್ದು ಸರಿಯಲ್ಲ. ಅವರನ್ನು ಬಂಧಿಸಬೇಕಿತ್ತು ಎಂದು ತಿಳಿಸಿದರು.
ಶಾಸಕ ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಆತ್ಮಸ್ಥೈರ್ಯ- ಸ್ವಾಭಿಮಾನ ಇಲ್ಲ ಎಂದು ಟೀಕಿಸಿದರು.
ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಕೆ. ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ಎನ್. ಮುನಿರತ್ನ, ಸಿ.ಕೆ. ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಎಸ್. ಹರೀಶ್ ಹಾಜರಿದ್ದರು.
ಕನ್ನಡಿಗರಿಗೆ ಸೇರಿದ ಜಮೀನು: ಆರ್.ಅಶೋಕ
‘ಕನ್ನಡಿಗರಿಗೆ ಸೇರಿದ ಜಮೀನನ್ನು ಬೇರೆಯವರಿಗೆ ಕೊಡಲು ಅವಕಾಶ ನೀಡುವುದಿಲ್ಲ’ ಎಂದು ವಿರೋಧ ಪಕ್ಷದ ನಾಯಕ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು. ‘ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದ ರಾಜ್ಯದ ಅನೇಕರು ಮನೆ ಇಲ್ಲದೆ ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಂತವರು ಕಾಣುವುದಿಲ್ಲ. ಸರ್ಕಾರದ ದಾಖಲೆ ಪ್ರಕಾರ ರಾಜ್ಯದಲ್ಲಿ 36 ಲಕ್ಷ ಬಡವರು ಮನೆ ಹಾಗೂ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂತಹವರಿಗೆ ಮನೆ ನೀಡಿಲ್ಲ. ಇವರೆಲ್ಲರೂ ಗೃಹಮಂಡಳಿ ಬಳಿ ಹೋದರೆ ನಾಳೆ ಬಾ ಎನ್ನುತ್ತಾರೆ’ ಎಂದು ಆಕ್ರೋಶ ಹೊರಹಾಕಿದರು. ‘150 ಅಕ್ರಮ ಮನೆಗಳನ್ನು ಒಡೆದು ಹಾಕಲಾಗಿದೆ. ಆದರೆ ಈಗ 280 ನಿವಾಸಿಗಳು ಬಂದಿದ್ದಾರೆ ಎಂಬುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಇಷ್ಟಾದರೂ ಬ್ಯಾಟರಾಯನಪುರ ಶಾಸಕರು ಪತ್ತೆಯೇ ಇಲ್ಲ’ ಎಂದು ಅಶೋಕ ಅವರು ಆಕ್ರೋಶ ಹೊರಹಾಕಿದರು. ‘ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಮನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಇತ್ಯರ್ಥವಾಗಲು ಎರಡು ವರ್ಷ ಬೇಕಾಗುತ್ತದೆ. ಆದರೆ ಇಲ್ಲಿನ ನಿವಾಸಿಗಳಿಗೆ ಎರಡೇ ದಿನದಲ್ಲಿ ಮನೆ ಮಂಜೂರು ಮಾಡುತ್ತಿದ್ದಾರೆ. ಇದು ಇಡೀ ಕನ್ನಡಿಗರ ಪ್ರಶ್ನೆ. ಕರ್ನಾಟಕವನ್ನು ಕನ್ನಡಿಗರಿಗೆ ಉಳಿಸಿ ಎಂಬ ಸಂದೇಶ ನೀಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.