ADVERTISEMENT

ರಾಜ್ಯಪಾಲರಿಗೆ ಅಪಮಾನ; ತಿಮ್ಮಾಪುರ ರಾಜೀನಾಮೆ ಕೊಡಲಿ: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 15:55 IST
Last Updated 27 ಜನವರಿ 2026, 15:55 IST
<div class="paragraphs"><p>ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ,ಆರ್‌. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸುರೇಶ್ ಬಾಬು, ಬಿ.ವೈ.ವಿಜಯೇಂದ್ರ ನೇತೃತ್ವತದಲ್ಲಿ ಬಿಜೆಪಿ, ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿದರು.&nbsp;</p></div>

ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ,ಆರ್‌. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸುರೇಶ್ ಬಾಬು, ಬಿ.ವೈ.ವಿಜಯೇಂದ್ರ ನೇತೃತ್ವತದಲ್ಲಿ ಬಿಜೆಪಿ, ಜೆಡಿಎಸ್‌ ಶಾಸಕರು ಪ್ರತಿಭಟನೆ ನಡೆಸಿದರು. 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರು ಅಪಮಾನ ಮಾಡಿದ್ದಾರೆ ಹಾಗೂ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯಿಸಿ ವಿಧಾನಸೌಧ ಆವರಣದಲ್ಲಿನ ಗಾಂಧೀಜಿ ಪ್ರತಿಮೆ ಮುಂದೆ ಬಿಜೆಪಿ, ಜೆಡಿಎಸ್‌ ಶಾಸಕರು ಮಂಗಳವಾರ ಪ್ರತಿಭಟನೆ ನಡೆಸಿದರು.

ADVERTISEMENT

ರಾಜ್ಯಪಾಲರ ವಿರುದ್ಧ ದುರ್ವರ್ತನೆ ತೋರಿದವರು ಹಾಗೂ ಶಾಸಕರ ಮನೆಗೆ ಬೆಂಕಿಯಿಟ್ಟ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.

ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ‘ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ತಿಮ್ಮಾಪುರ ಅವರು ರಾಜೀನಾಮೆ ಕೊಡದೇ ನಾವ್ಯಾರೂ ಸದನ ಬಿಟ್ಟು ಹೋಗುವುದಿಲ್ಲ. ₹6 ಸಾವಿರ ಕೋಟಿ ಹಗರಣ ಎಂದು ಅಬಕಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಹೇಳಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪಾಲು ಎಷ್ಟು’ ಎಂದು ಪ‍್ರಶ್ನಿಸಿದರು. ‌

ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ‘ಜಂಟಿ ಅಧಿವೇಶನ ಮುಗಿಸಿ ರಾಜ್ಯಪಾಲರು ವಾಪಸ್ ಹೋಗುವ ಸಂದರ್ಭದಲ್ಲಿ ವಿಧಾನಸಭೆಯ ಸಭಾಂಗಣದಲ್ಲಿ ರಾಜ್ಯಪಾಲರಿಗೆ ಧಿಕ್ಕಾರ ಕೂಗಿ, ಅಗೌರವ ತೋರಿಸಿದ್ದಾರೆ. ಹಾಗಾಗಿ ಬಿ.ಕೆ.ಹರಿಪ್ರಸಾದ್, ಎಸ್.ರವಿ, ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್ ನಾಯಕರು ಎಲ್ಲದಕ್ಕೂ ಧಮ್ಕಿ ಹಾಕುತ್ತಾರೆ. ಶಿಡ್ಲಘಟ್ಟದ ರಾಜೀವ್ ಗೌಡ 14 ದಿನ ಪೊಲೀಸರ ಕೈಗೆ ಸಿಕ್ಕಿಲ್ಲವೆಂದರೆ ಹೇಗೆ? ಅವರನ್ನು ಕಾಂಗ್ರೆಸ್ ನಾಯಕರು ತಮ್ಮ ಮನೆಯಲ್ಲಿ ಇಟ್ಕೊಂಡಿದ್ದರಲ್ಲವೇ? ಎಂದು ನಾಯಕರು ಪ್ರಶ್ನಿಸಿದರು.

ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ್‌, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಕುರಿತು ವಿಡಿಯೊ ಆಡಿಯೊಗಳು ಹರಿದಾಡುತ್ತಿವೆ. ರಾಜ್ಯದ ಮಾನ ಮಾರ್ಯದೆ ಹರಾಜಾಗುತ್ತಿದೆ. ಕೂಡಲೇ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು.
ಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ

ಸಿಬಿಐ ತನಿಖೆ ನಡೆಸಿ: ವಿಜಯೇಂದ್ರ

‘₹6 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಅಬಕಾರಿ ಹಗರಣದ ತನಿಖೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅಥವಾ ಸಿಬಿಐನಿಂದ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

‘ಅಬಕಾರಿ ಹಗರಣದಲ್ಲಿ ಸ್ವತಃ ಅಬಕಾರಿ ಸಚಿವರು ಹಾಗೂ ಅವರ ಕುಟುಂಬದ ಸದಸ್ಯರ ಹೆಸರು ಕೇಳಿ ಬರುತ್ತಿದೆ. ಹಾಗಿದ್ದರೂ ಈ ವಿಷಯದಲ್ಲಿ ಸದನದಲ್ಲಿ ಚರ್ಚೆ ಮಾಡಲು  ಮುಖ್ಯಮಂತ್ರಿ ಬಿಡುತ್ತಿಲ್ಲ’ ಎಂದು ಆಕ್ಷೇಪಿಸಿದರು.

‘ಗ್ರಾಮೀಣ ಭಾಗದ ದಿನಸಿ ಅಂಗಡಿಯಲ್ಲಿ ಸಹ ಮದ್ಯ ಮಾರಾಟ ಮಾಡಲಾಗುತ್ತಿದೆ. ಸಿದ್ದರಾಮಯ್ಯ ತಮ್ಮ ಬೊಕ್ಕಸಕ್ಕೆ ಹಣ ತುಂಬಿಸಿಕೊಳ್ಳಲು ಹಾಗೂ ಗ್ಯಾರಂಟಿಗಳಿಗೆ ಹಣ ಹೊಂದಿಸಿಕೊಳ್ಳಲು ಎರಡೂವರೆ ವರ್ಷಗಳಲ್ಲಿ ಮದ್ಯ ಮಾರಾಟದ ಗುರಿಯನ್ನು ಶೇಕಡ 35ರಷ್ಟು ಹೆಚ್ಚಿಸಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಆಯಕಟ್ಟಿನ ಸ್ಥಾನಕ್ಕೆ ಬರಲು ಕೋಟಿ ಕೋಟಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.