ADVERTISEMENT

ಉಪನ್ಯಾಸಕರ ನಿಯೋಜನೆ ರದ್ದು ವಿರೋಧಿಸಿ ಮರಿತಿಬ್ಬೇಗೌಡ ನೇತೃತ್ವದಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 8:30 IST
Last Updated 9 ಮೇ 2022, 8:30 IST
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ವಿಕಾಸಸೌಧದಲ್ಲಿ ಇರುವ ಉನ್ನತ ಶಿಕ್ಷಣ ಸಚಿವರ ಕೊಠಡಿ ಮುಂದೆ ಬೋಧಕರ ನಿಯೋಜನೆ ರದ್ದತಿ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ವಿಕಾಸಸೌಧದಲ್ಲಿ ಇರುವ ಉನ್ನತ ಶಿಕ್ಷಣ ಸಚಿವರ ಕೊಠಡಿ ಮುಂದೆ ಬೋಧಕರ ನಿಯೋಜನೆ ರದ್ದತಿ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನೆ ಮಾಡಿದರು.   

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳ 1,200 ಉಪನ್ಯಾಸಕರ ನಿಯೋಜನೆ ಆದೇಶವನ್ನು ರದ್ದು ಮಾಡಿರುವುದನ್ನು ವಿರೋಧಿಸಿ ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಮರಿತಿಬ್ಬೇಗೌಡ ನೇತೃತ್ವದಲ್ಲಿ ಪರಿಷತ್‌ ಸದಸ್ಯರು ವಿಕಾಸಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಕಚೇರಿ ಎದುರು ಸೋಮವಾರ ಧರಣಿ ಆರಂಭಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯರಾದ ಮೋಹನ್‌ ಕೊಂಡಜ್ಜಿ, ಯು.ಬಿ. ವೆಂಕಟೇಶ್‌ ಜತೆಯಲ್ಲಿದ್ದಾರೆ. ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಉಪ ನಾಯಕ ಕೆ. ಗೋವಿಂದರಾಜ್‌, ಮುಖ್ಯ ಸಚೇತಕ ಪ್ರಕಾಶ್‌ ರಾಥೋಡ್‌ ಧರಣಿ ಸ್ಥಳಕ್ಕೆ ಭೇಟಿನೀಡಿ ಬೆಂಬಲ ಸೂಚಿಸಿದರು.

“ಪ್ರದೀಪ್‌ ಆಯುಕ್ತರೇ ಗೋ ಬ್ಯಾಕ್‌ ಟು ಮಹಾರಾಷ್ಟ್ರʼ, “ಬೋಧಕರ ನಿಯೋಜನೆ ರದ್ಧತಿ ಆದೇಶ ಹಿಂಪಡೆಯಬೇಕುʼ, “ಆಯುಕ್ತರ ಕೈಗೊಂಬೆ ಸಚಿವ ಡಾ. ಅಶ್ವತ್ಥ ನಾರಾಯಣʼ, “ಆಯುಕ್ತರ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರʼ ಎಂಬ ಭಿತ್ತಿಪತ್ರಗಳನ್ನು ಹಿಡಿದು ವಿಧಾನ ಪರಿಷತ್‌ ಸದಸ್ಯರು ಧರಣಿ ನಡೆಸುತ್ತಿದ್ದಾರೆ.

ADVERTISEMENT

ಧರಣಿಗೆ ಬೆಂಬಲ ಸೂಚಿಸಿ ಸುದ್ದಿಗಾರರ ಜತೆ ಮಾತನಾಡಿದ ಬಿ.ಕೆ. ಹರಿಪ್ರಸಾದ್‌, “1,200 ಉಪನ್ಯಾಸಕರ ನಿಯೋಜನೆ ರದ್ದುಗೊಳಿಸುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ. ಈ ವಿಚಾರವನ್ನು ಸಚಿವರ ಗಮನಕ್ಕೆ ತರುವುದಕ್ಕಾಗಿ ವಿಧಾನ ಪರಿಷತ್‌ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ನಾನು ಈ ಧರಣಿಯನ್ನು ಬೆಂಬಲಿಸಿದ್ದೇನೆʼ ಎಂದರು.

ಏಪ್ರಿಲ್‌- ಮೇ ತಿಂಗಳಲ್ಲಿ ಪದವಿ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ. ಈಗ ಏಕಾಏಕಿ ಉಪನ್ಯಾಸಕರ ವರ್ಗಾವಣೆ ಮಾಡಿರುವುದು ಅವೈಜ್ಞಾನಿಕ ಕ್ರಮ. ಗರ್ಭಿಣಿಯರು, ಅಂಗವಿಕಲರು ಇದ್ದಾರೆ. ಅವರು ತಕ್ಷಣವೇ ದೂರದ ಊರುಗಳಿಗೆ ಹೋಗಲು ಸಾಧ್ಯವಿಲ್ಲ. ನಿಯೋಜನೆ ರದ್ಧತಿ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸರ್ಕಾರ ಕಮಿಷನ್‌ ದಂಧೆಗೆ ಕುಖ್ಯಾತಿ ಪಡೆದಿದೆ. ಶಿಕ್ಷಕರ ವರ್ಗಾವಣೆಯಲ್ಲೂ ಕಮಿಷನ್‌ ದಂಧೆ ನಡೆಯುತ್ತಿರುವ ಊಹಾಪೋಹ ಇದೆ. ಸರ್ಕಾರ ತಕ್ಷಣವೇ ವರ್ಗಾವಣೆ ನೀತಿ ಜಾರಿಗೊಳಿಸಬೇಕು. ಅಧಿಕಾರಿಗಳ ಮಾತು ಕೇಳಿಕೊಂಡು ವರ್ಗಾವಣೆ ಮಾಡುವುದನ್ನು ಸಚಿವರು ನಿಲ್ಲಿಸಬೇಕು. ಧರಣಿ ನಡೆಸುತ್ತಿರುವ ಮರಿತಿಬ್ಬೇಗೌಡರ ಜತೆ ಸಚಿವರು ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.