ADVERTISEMENT

ಡಿಜಿಟಲ್ ವೇದಿಕೆ ಭದ್ರತೆಗೆ ‘ಬ್ಲಾಕ್‌ ಚೈನ್’ ತಂತ್ರಜ್ಞಾನ ಅಳವಡಿಕೆ

ಆನ್‌ಲೈನ್ ದತ್ತಾಂಶ ಸುರಕ್ಷತೆಗೆ ಕ್ರಮ: ರಾಮ್‌ಪ್ರಸಾತ್ ಮನೋಹರ್

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 14:08 IST
Last Updated 30 ಏಪ್ರಿಲ್ 2025, 14:08 IST
ರಾಮ್‌ಪ್ರಸಾತ್ ಮನೋಹರ್
ರಾಮ್‌ಪ್ರಸಾತ್ ಮನೋಹರ್   

ಬೆಂಗಳೂರು: ಡಿಜಿಟಲ್‌ ವೇದಿಕೆಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ‘ಬ್ಲಾಕ್‌ಚೈನ್‌’ ನಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಜಲಮಂಡಳಿ ಚಿಂತನೆ ನಡೆಸಿದೆ.

‘ಜಲಮಂಡಳಿಯ ನೀರಿನ ಸಂಪರ್ಕ ಅರ್ಜಿ ಸ್ವೀಕಾರದ ಆನ್‌ಲೈನ್ ಜಾಲತಾಣದಿಂದ ದತ್ತಾಂಶ ಕದಿಯುವ ಪ್ರಯತ್ನಗಳು ನಡೆದಿವೆ. ಈ ಕಾರಣದಿಂದ ಇಂಥ ತಂತ್ರಜ್ಞಾನಗಳ ಅಳವಡಿಕೆಗೆ ಮುಂದಾಗಿದ್ದೇವೆ’ ಎಂದು ಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

‘ಏಪ್ರಿಲ್‌ 11 ರಂದು ಬೆಳಿಗ್ಗೆ ಜಲಮಂಡಳಿಯ ನೀರಿನ ಸಂಪರ್ಕಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಜಾಲತಾಣದಿಂದ ದತ್ತಾಂಶ ಕದಿಯುವ ಪ್ರಯತ್ನ ನಡೆದಿತ್ತು. ಈ ಕುರಿತು ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಮಾಹಿತಿ (ಸಿಇಆರ್‌ಟಿ–ಐಎನ್‌) ನೀಡಿದ ತಕ್ಷಣ, ನಮ್ಮ ಎಂಜಿನಿಯರ್‌ಗಳು ಸೈಬರ್ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಪ್ರಾಥಮಿಕ ಹಂತದ ತನಿಖೆ ಪ್ರಕಾರ, ಜಾಲತಾಣದಲ್ಲಿದ್ದ ಗ್ರಾಹಕರಿಗೆ ಸಂಬಂಧಿಸಿದ ಸೂಕ್ಷ್ಮವಾದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ’ ಎಂದು ಅವರು ವಿವರಿಸಿದ್ದಾರೆ.

‘ಬೆಂಗಳೂರು ಜಲಮಂಡಳಿಯ ಗ್ರಾಹಕರ ದತ್ತಾಂಶಗಳನ್ನು ರಾಜ್ಯ ಸರ್ಕಾರ ನಿರ್ವಹಿಸುವಂತಹ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಈ ಜಾಲತಾಣದಲ್ಲಿದ್ದ ದತ್ತಾಂಶಗಳನ್ನು ಹೆಚ್ಚು ಸುರಕ್ಷಿತ ಕೇಂದ್ರೀಕೃತ ಸರ್ವರ್‌ಗಳಿಗೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.