ADVERTISEMENT

ಬ್ಲ್ಯಾಕ್‌ಮೇಲ್ ಮಾಡಿ ₹ 3 ಲಕ್ಷ ಕಿತ್ತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 4:09 IST
Last Updated 12 ಜನವರಿ 2021, 4:09 IST

ಬೆಂಗಳೂರು: ಮಹಿಳೆ ಜೊತೆಗಿನ ವಿಡಿಯೊ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡಿ ₹ 3 ಲಕ್ಷ ಕಿತ್ತ ಆರೋಪದಡಿ ಇಮ್ರಾನ್‌ ಎಂಬಾತನ ವಿರುದ್ಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹಣ ಕಳೆದುಕೊಂಡಿರುವ 36 ವರ್ಷದ ಮಹಿಳೆ ದೂರು ನೀಡಿದ್ದಾರೆ. ಮಂಗಳೂರು ನಿವಾಸಿ ಎನ್ನಲಾದ ಇಮ್ರಾನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿದರು.

‘ಎರಡು ವರ್ಷಗಳ ಹಿಂದೆ ಮಹಿಳೆ ಮೊಬೈಲ್‌ಗೆ ಅಪರಿಚಿತನಾಗಿ ಕರೆ ಮಾಡಿದ್ದ ಆರೋಪಿ, ‘ಪರಿಚಯಸ್ಥರೊಬ್ಬರ ಅಂಗಡಿಯಲ್ಲಿ ನಿಮ್ಮ ಮೊಬೈಲ್ ನಂಬರ್ ಸಿಕ್ಕಿತ್ತು. ಅದಕ್ಕೆ ಕರೆ ಮಾಡಿದೆ’ ಎಂದು ಚೆನ್ನಾಗಿ ಮಾತನಾಡಿದ್ದ. ಮಹಿಳೆಯೂ ಆತನ ಜೊತೆ ಮಾತನಾಡಿದ್ದರು. ಕೆಲ ದಿನಗಳ ನಂತರ ಆರೋಪಿ, ಮಹಿಳೆಗೆ ಕರೆ ಮಾಡಿದ್ದ. ತದನಂತರ ಇಬ್ಬರೂ ಸ್ನೇಹಿತರಾಗಿದ್ದರು. ವಾಟ್ಸ್‌ಆ್ಯಪ್‌ ಮೂಲಕವೂ ಸಂದೇಶ ಕಳುಹಿಸಲಾರಂಭಿಸಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಕೆಲ ದಿನಗಳ ಹಿಂದಷ್ಟೇ ವಿಡಿಯೊ ಕರೆ ಮಾಡಿದ್ದ ಆರೋಪಿ ಜೊತೆಯಲ್ಲಿ ಮಹಿಳೆ ಸಲುಗೆಯಿಂದ ಮಾತನಾಡಿದ್ದರು. ಅದೇ ವಿಡಿಯೊವನ್ನು ಚಿತ್ರೀಕರಿಸಿಕೊಂಡಿದ್ದ ಆರೋಪಿ, ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಸಿದ್ದ. ಮರ್ಯಾದೆಗೆ ಅಂಜಿದ್ದ ಮಹಿಳೆ, ಆತನಿಗೆ ₹ 3 ಲಕ್ಷ ಕೊಟ್ಟಿದ್ದರು. ಅದಾದ ನಂತರವೂ ಆರೋಪಿ ಹಣ ಕೇಳಲಾರಂಭಿಸಿದ್ದ. ನೊಂದ ಮಹಿಳೆ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.