ADVERTISEMENT

‘ಪಿಎಸ್‌ಐ’ ಹೆಸರಿನಲ್ಲಿ ಮಹಿಳೆಗೆ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 17:45 IST
Last Updated 21 ಅಕ್ಟೋಬರ್ 2021, 17:45 IST

ಬೆಂಗಳೂರು: ತಾನೊಬ್ಬ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಎಂಬುದಾಗಿ ಹೇಳಿಕೊಂಡು ಮಹಿಳೆಯೊಬ್ಬರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಸಂದೀಪ್‌ನನ್ನು (34) ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಶಿವಮೊಗ್ಗದ ಸಂದೀಪ್, ಉದ್ಯಮಿ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾನೆ. 45 ವರ್ಷದ ಮಹಿಳೆ ನೀಡಿದ್ದ ದೂರು ಆಧರಿಸಿ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಲಸಕ್ಕಾಗಿ ಮಹಿಳೆ ಹುಡುಕಾಡುತ್ತಿದ್ದರು. ಅವರ ಮೊಬೈಲ್ ನಂಬರ್ ತಿಳಿದುಕೊಂಡಿದ್ದ ಆರೋಪಿ, ಕರೆ ಮಾಡಿ ಮಾತನಾಡಿದ್ದ. ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ. ಮಹಿಳೆಗೆ ವಿಡಿಯೊ ಕರೆ ಮಾಡಿದ್ದ ಆತ, ಬಟ್ಟೆಗಳನ್ನು ಬಿಚ್ಚುವಂತೆ ಹೇಳಿದ್ದ. ಅದಕ್ಕೆ ಮಹಿಳೆ ನಿರಾಕರಿಸಿದ್ದರು.’

ADVERTISEMENT

‘ವಿಡಿಯೊ ಕರೆ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದ ಆರೋಪಿ, ಮಹಿಳೆಯನ್ನು ಅರೆನಗ್ನವಾಗಿ ಕಾಣುವಂತೆ ಮಾರ್ಪಿಂಗ್ ಮಾಡಿದ್ದ. ಅದೇ ವಿಡಿಯೊವನ್ನು ಮಹಿಳೆಗೆ ಕಳುಹಿಸಿ ಬ್ಲ್ಯಾಕ್‌ಮೇಲ್ ಮಾಡಿ, ಅವರನ್ನು ಯಲಚೇನಹಳ್ಳಿ ಬಳಿ ಆ.21ರಂದು ಕರೆಸಿಕೊಂಡಿದ್ದ. ‘ನಾನೊಬ್ಬ ಪಿಎಸ್‌ಐ. ನಿನ್ನ ವಿಡಿಯೊ ನನ್ನ ಬಳಿ ಇದೆ. ಕೇಳಿದಷ್ಟು ಹಣ ಕೊಡದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತೇನೆ. ನಿನ್ನನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇನೆ’ ಎಂದೂ ಆತ ಹೇಳಿದ್ದ.’

‘ಹಣಕ್ಕೆ ಪೀಡಿಸಲಾರಂಭಿಸಿದ್ದ ಆರೋಪಿ, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದ. ನೊಂದ ಮಹಿಳೆ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.