ADVERTISEMENT

ಜಂಟಿ ಆಯುಕ್ತರಿಗೆ ಧಮ್ಕಿ: ಗುತ್ತಿಗೆದಾರ ಸೆರೆ

₹ 63.88 ಲಕ್ಷದ ಬಿಲ್‌ ಕಡತಕ್ಕೆ ಸಹಿ ಹಾಕಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:48 IST
Last Updated 7 ಅಕ್ಟೋಬರ್ 2018, 19:48 IST
ವೆಂಕಟೇಶ್‌
ವೆಂಕಟೇಶ್‌   

ಬೆಂಗಳೂರು: ತ್ಯಾಜ್ಯ ನಿರ್ವಹಣೆಯ ಬಿಲ್ ಪಾವತಿಗೆ ಅನುಮೋದನೆ ನೀಡುವಂತೆ ಬಿಬಿಎಂಪಿ ರಾಜರಾಜೇಶ್ವರಿನಗರ ವಲ
ಯದ ಜಂಟಿ ಆಯುಕ್ತ ಎಚ್‌.ಬಾಲಶೇಖರ್ ಅವರಿಗೆ ಧಮ್ಕಿ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ
ದಡಿ ಗುತ್ತಿಗೆದಾರ ವಿ.ವೆಂಕಟೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರ ನಿವಾಸಿಯಾದ ವೆಂಕಟೇಶ್‌, ಜೆ.ಪಿ.ಪಾರ್ಕ್‌ ವಾರ್ಡ್‌ನ ತ್ಯಾಜ್ಯ ನಿರ್ವಹಣೆ ಗುತ್ತಿಗೆ ಪಡೆದಿದ್ದ. ಜಂಟಿ ಆಯುಕ್ತರಾಗಿ ಸೆ.23ರಂದು ಅಧಿಕಾರ ವಹಿಸಿಕೊಂಡ ಬಾಲಶೇಖರ್‌ ಅವರು, ₹ 63.88 ಲಕ್ಷ ಬಿಲ್ ಪಾವತಿಗೆ ಸಂಬಂಧಿಸಿದ ಕಡತಗಳಿಗೆ ಅನುಮೋದನೆ ನೀಡಿರಲಿಲ್ಲ. ಇದರಿಂದ ಕುಪಿತಗೊಂಡ ವೆಂಕಟೇಶ್, ಅ.3ರಂದು ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದ.

‘ವೆಂಕಟೇಶ್ ಸಲ್ಲಿಸಿದ್ದ ಬಿಲ್‌ಗಳಲ್ಲಿ ನಿವೃತ್ತ ಅಧಿಕಾರಿಯೊಬ್ಬರ ಸಹಿ ಇತ್ತು. ಹೀಗಾಗಿ, ಕಡತಗಳಿಗೆ ಸಹಿಮಾಡಿರಲಿಲ್ಲ. ಅ.3ರಂದು ಕಚೇರಿಗೆ ಬಂದ ವೆಂಕಟೇಶ್, ಸುನೀಲ್‌ ಕುಮಾರ್ ಹಾಗೂ ಇತರ ಆರು ಮಂದಿ ಸಹಚರರು, ‘ಕಡತಗಳಿಗೆ ಸಹಿ ಮಾಡಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ’ ಎಂದರು. ಅದಕ್ಕೆ ಒಪ್ಪದಿದ್ದಾಗ, ‘ಕಡತಗಳನ್ನು ವಾಪಸ್ ಕೊಡಿ. ನಮಗೆ ಹೇಗೆ ಮಂಜೂರು ಮಾಡಿಸಿಕೊಳ್ಳಬೇಕು ಎಂಬುದು ಗೊತ್ತಿದೆ’ ಎಂದು ಏರುಧ್ವನಿಯಲ್ಲಿ ಹೇಳಿದರು. ನನ್ನ ಬಳಿ ಬಂದಿರುವ ಕಚೇರಿ ಕಡತಗಳನ್ನು ಕೊಡಲಾಗುವುದಿಲ್ಲ ಎಂದಾಗ ವಾಪಸ್ ಹೊರಟು ಹೋಗಿದ್ದರು’ ಎಂದು ಬಾಲಶೇಖರ್ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಶುಕ್ರವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆ ಹತ್ತಿರ ಬಂದ ವೆಂಕಟೇಶ್ ಹಾಗೂ ಸಹಚರರು, ನನ್ನೊಂದಿಗೆ ತುಂಬ ಒರಟಾಗಿ ನಡೆದುಕೊಂಡರು. ಈ ವರ್ತನೆ ಗಮನಿಸಿದರೆ ನನ್ನ ಜೀವಕ್ಕೇ ಕುತ್ತು ಬರುವ ಸಾಧ್ಯತೆ ಇದೆ. ಹೀಗಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಂಡು ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕು’ ಎಂದು ಅವರು ದೂರಿನಲ್ಲಿ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಜೆ.ಪಿ. ಪಾರ್ಕ್‌ ಪ್ರದೇಶದಲ್ಲಿ ಕಸ ಸಾಗಿಸಲು 21 ವಾಹನಗಳನ್ನು ಬಳಸಲಾಗುತ್ತಿದೆ ಎಂದು ಗುತ್ತಿಗೆದಾರರು ಪಾಲಿಕೆಗೆ ದಾಖಲೆ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಅಲ್ಲಿ ಕೇವಲ 13 ವಾಹನಗಳು ಕಾರ್ಯಾ
ಚರಿಸುತ್ತಿರುವುದು, ವಾಹನಗಳ ನಕಲಿ ನೋಂದಣಿ ಸಂಖ್ಯೆ ನೀಡಿರುವುದು, ಬೈಕ್‌, ಕಾರುಗಳ ನೋಂದಣಿ ಸಂಖ್ಯೆ ನೀಡಿ ಕಸ ಸಾಗಾಟ ವಾಹನ ಎಂದು ತೋರಿಸಿರುವುದು ಬೆಳಕಿಗೆ ಬಂದಿತ್ತು. ಈ ಅಕ್ರಮದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಈ ನಡುವೆ ಹಣ ಪಾವತಿಸುವಂತೆ ಕೋರಿ ವೆಂಕಟೇಶ್‌ ಹೈಕೋರ್ಟ್ ಮೊರೆ ಹೋಗಿದ್ದ.

‘ಕಡತಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಎಂದು ಹೈಕೋರ್ಟ್‌ ಷರಾ ಬರೆದುಕೊಟ್ಟಿತ್ತು. ಅದನ್ನೇ ಆದೇಶ ಎಂದು ತೋರಿಸಿ ಹಣ ಪಾವತಿಸುವಂತೆ ಒತ್ತಾಯಿಸಿದ್ದ. ಹೈಕೋರ್ಟ್‌ ಆದೇಶದಂತೆಯೇ ಪರಿಶೀಲಿಸಿದಾಗ ಲೋಪ ಗಮನಕ್ಕೆ ಬಂದಿದೆ. ಹೀಗಾಗಿ ಸಹಿ ಹಾಕಲಿಲ್ಲ. ಈ ಸಹಿ ಯಾರದ್ದು ಎಂದು ಬಿಲ್‌ನ ಆರಂಭಿಕ ಪರಿಶೀಲನೆ ನಡೆಸಿದ ಕಿರಿಯ ಅಧಿಕಾರಿಗಳನ್ನು ವಿಚಾರಿಸಿದ್ದೇನೆ. ಯಾರಿಂದಲೂ ಸರಿಯಾದ ಉತ್ತರ ಬಂದಿಲ್ಲ’ ಎಂದು ಬಾಲಶೇಖರ್‌ ಹೇಳಿದರು.

ಪ್ರಸಕ್ತ ವರ್ಷ ಜನವರಿಯಿಂದ ಮಾರ್ಚ್‌ವರೆಗಿನ ಬಿಲ್‌ಗೆ ಅಂದಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸಹಿ ಹಾಕಬೇಕಿತ್ತು. ಅವರು ಮೇ ತಿಂಗಳಲ್ಲಿ ನಿವೃತ್ತರಾಗಿದ್ದರು. ಆದರೂ ಈ ಕಡತಗಳಿಗೆ ಆಗಸ್ಟ್‌ ತಿಂಗಳಿನಲ್ಲಿ ಅವರ ಸಹಿ ಬಿದ್ದಿತ್ತು. ನಿವೃತ್ತರಾದ ಬಳಿಕ ಅವರು ಕಚೇರಿ ಕಡತಗಳಿಗೆ ಸಹಿ ಹಾಕುವಂತಿಲ್ಲ. ಹಾಗಿದ್ದರೂ ಅವರ ಸಹಿಯನ್ನು ವೆಂಕಟೇಶ್‌ ಹಾಕಿಸಿದ್ದ. ಇದು ಹೇಗೆ ಸಾಧ್ಯ’ ಎಂಬುದು ಬಾಲಶೇಖರ್‌ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.