ADVERTISEMENT

ಗುರೂಜಿಗೆ ಬ್ಲ್ಯಾಕ್‌ಮೇಲ್‌: ದಿವ್ಯಾ ವಸಂತ್‌ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:29 IST
Last Updated 15 ಮೇ 2025, 16:29 IST
ದಿವ್ಯಾ 
ದಿವ್ಯಾ    

ಬೆಂಗಳೂರು: ಜ್ಯೋತಿಷಿ ಆನಂದ್‌ ಗುರೂಜಿಗೆ ಬ್ಲ್ಯಾಕ್‌ಮೇಲ್‌ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಅಡಿ ಪತ್ರಕರ್ತೆ ದಿವ್ಯಾ ವಸಂತ್‌ ಹಾಗೂ ಯುಟ್ಯೂಬ್‌ ಚಾನಲ್‌ನ ಕೃಷ್ಣಮೂರ್ತಿ ವಿರುದ್ಧ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ನವರತ್ನ ಅಗ್ರಹಾರ ಸಾದಹಳ್ಳಿ ಗೇಟ್‌ನಲ್ಲಿ ಇರುವ ಮಹರ್ಷಿ ಮಂದಿರದ ಆನಂದ್‌ ಗುರೂಜಿ ನೀಡಿರುವ ದೂರು ಆಧರಿಸಿ ಮಾಹಿತಿ ತಂತ್ರಜ್ಞಾನ ಕಾಯ್ದೆ 2008 ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 126(2), 351(3), 352 ಅಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ಕೃಷ್ಣಮೂರ್ತಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು ಕೃಷ್ಣಮೂರ್ತಿ ಅವರು ಬಿಡುಗಡೆ ಆಗಿದ್ದಾರೆ. ಈ ಪ್ರಕರಣದಲ್ಲಿ ದಿವ್ಯಾ ಅವರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು

ADVERTISEMENT

ಎಫ್‌ಐಆರ್‌ನಲ್ಲಿ ಏನಿದೆ?:

‘ಸಾದಹಳ್ಳಿ ಗೇಟ್‌ ಬಳಿ ಕಳೆದ ಎಂಟು ವರ್ಷಗಳಿಂದ ವಾಸವಿದ್ದು, ಸಾರ್ವಜನಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿದ್ದೇನೆ. ಜ್ಯೋತಿಷ್ಯ ಹಾಗೂ ವಾಸ್ತುಶಿಲ್ಪದ ಕುರಿತು ವಿವಿಧ ಪುಸ್ತಕಗಳನ್ನೂ ಬರೆದಿದ್ದೇನೆ. ಖಾಸಗಿ ವಾಹನಿಯೊಂದರಲ್ಲಿ ಜ್ಯೋತಿಷ್ಯ ಕುರಿತು ಪ್ರಸಾರ ಆಗುವ ಕಾರ್ಯಕ್ರಮದಲ್ಲೂ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದೇನೆ. ಕಳೆದ ಆಗಸ್ಟ್‌ 26ರಂದು ಕಾರ್ಯಕ್ರಮ ಮುಗಿಸಿಕೊಂಡು ಆಶ್ರಮದ ಬಳಿಗೆ ಬರುತ್ತಿದ್ದಾಗ ಅಪರಿಚಿತರು ಕಾರು ಅಡ್ಡಗಟ್ಟಿ ಏಕವಚನದಲ್ಲಿ ನಿಂದನೆ ಮಾಡಿದ್ದರು. ದೌರ್ಜನ್ಯ ಎಸಗಿದ್ದರು’ ಎಂದು ಗುರೂಜಿ ನೀಡಿರುವ ದೂರು ಆಧರಿಸಿ ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಹಣಕ್ಕೆ ಬೇಡಿಕೆ:

ಅಶ್ಲೀಲ ವಿಡಿಯೊಗಳಿದ್ದು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿ ಅಪರಿಚಿತರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ನಾನು ಒಪ್ಪದೇ ಇರುವ ಕಾರಣಕ್ಕೆ ಕೊಲೆ ಬೆದರಿಕೆ ಹಾಕಿದ್ದರು. ಅದಾದ ಕೆಲವು ದಿನಗಳ ಬಳಿಕ ಕೃಷ್ಣಮೂರ್ತಿ ಎಂಬಾತ ಆಶ್ರಮಕ್ಕೆ ಬಂದು ವಿಡಿಯೊಗಳನ್ನು ಚಿತ್ರೀಕರಿಸಿದ್ದರು. ಅಲ್ಲದೇ ಯುಟ್ಯೂಬ್‌ ಹಾಗೂ ಸಾಮ್ರಾಟ್‌ ಟಿ.ವಿಯಲ್ಲಿ ವಿಡಿಯೊ ಪ್ರಸಾರ ಮಾಡಿ ಮಾನಸಿಕ ಹಿಂಸೆ ನೀಡಿದ್ದರು. ವಿಡಿಯೊ ಪ್ರಸಾರ ಮಾಡಬಾರದೆಂದು ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ಅದಾದ ಮೇಲೂ ಕಳೆದ ಏಪ್ರಿಲ್‌ 9ರಂದು ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ್‌ ಅವರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸಾಮ್ರಾಟ್‌ ಟಿ.ವಿ ಹಾಗೂ ಮುಖವಾಡ ಒ ಲೈವ್‌ ಎಂಬ ವಾಹಿನಿಯಲ್ಲಿ ಅಶ್ಲೀಲ ಪದ ಬಳಸಿ ವಿಡಿಯೊವೊಂದನ್ನು ಪ್ರಸಾರ ಮಾಡಿದ್ದರು. ಮೂರನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಏಪ್ರಿಲ್‌ 17ರಂದು ನ್ಯಾಯಾಲಯವು ಮತ್ತೆ ತಡೆಯಾಜ್ಞೆ ನೀಡಿತ್ತು. ಇದಾದ ಮೇಲೂ ಕೃಷ್ಣಮೂರ್ತಿ ಇನ್ನೊಂದು ವಿಡಿಯೊವನ್ನು ಯುಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದರು. ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ್‌ ಅವರ ವಿರುದ್ಧ ಕ್ರಮ  ಕೈಗೊಳ್ಳವಂತೆ ಗುರೂಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆಯೂ ದಿವ್ಯಾ ಬಂಧನ ಇಂದಿರಾನಗರ ಸೇರಿದಂತೆ ಹಲವು ಕಡೆಯ ಸ್ಪಾಗಳಲ್ಲಿ ಸುಲಿಗೆ ನಡೆಸಿದ್ದ ಆರೋಪದಡಿ ಪತ್ರಕರ್ತೆ ದಿವ್ಯಾ ವಸಂತ ಅವರನ್ನು ಜೆ.ಬಿ.ನಗರ ಠಾಣೆ ಪೊಲೀಸರು 2024ರ ಜುಲೈ 11ರಂದು ಕೇರಳದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಸಕ್ರಿಯವಾಗಿದ್ದಾರೆ. ಸುದ್ದಿ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಣೆ ನಡೆಸುತ್ತಿದ್ದ ವೇಳೆ ‘ರಾಜ್ಯಕ್ಕೆ ಖುಷಿ ಕೊಡುವ ಸುದ್ದಿ’ ಎಂದು ದಿವ್ಯಾ ಪ್ರಸ್ತಾಪಿಸಿದ್ದ ಮಾತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.