ADVERTISEMENT

ಅನಿಲ ವಿದ್ಯುತ್ ಸ್ಥಾವರದಲ್ಲಿ ಸ್ಫೋಟ

ಪ್ರಯೋಗದ ವೇಳೆ ಅವಘಡ; ಎಂಜಿನಿಯರ್‌ಗಳು ಸೇರಿ 14 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 20:54 IST
Last Updated 2 ಅಕ್ಟೋಬರ್ 2020, 20:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಯಲಹಂಕದ ಅನಿಲ ಆಧಾರಿತ ವಿದ್ಯುತ್ ಸ್ಥಾವರದಲ್ಲಿ ಶುಕ್ರವಾರ ನಸುಕಿನಲ್ಲಿ ಸ್ಫೋಟ ಸಂಭವಿಸಿದ್ದು, ಎಂಜಿನಿಯರ್‌ಗಳು ಸೇರಿ 14 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಎಚ್‌.ಎನ್. ಶ್ರೀನಿವಾಸ್, ಕೃಷ್ಣ ಭಟ್, ಮನೋಜ್, ನಿತೇಶ್, ನರಸಿಂಹ ಮೂರ್ತಿ, ಹರೀಶ್, ಅಕುಲ್ ರಘುರಾಮ್, ಶ್ರೀನಿವಾಸ್, ಅಶೋಕ, ಡಿ.ಪಿ. ಶ್ರೀನಿವಾಸ್, ಮಂಜಪ್ಪ, ಅಶ್ವತ್ಥನಾರಾಯಣ, ಕೆ.ಪಿ.ರವಿ ಹಾಗೂ ಬಾಲರಾಜ್ ಗಾಯಗೊಂಡವರು. ಆಸ್ಟರ್ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಹಾಗೂ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಉದ್ಯೋಗಿಗಳು.

ADVERTISEMENT

‘ಅನಿಲ ಆಧಾರಿತ ವಿದ್ಯುತ್ ತಯಾರಿಸುವ ಉದ್ದೇಶದಿಂದ ಕೆಪಿಸಿಎಲ್ ನೇತೃತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸ್ಥಾವರ ನಿರ್ಮಾಣದ ಗುತ್ತಿಗೆಯನ್ನು ಬಿಎಚ್‌ಇಎಲ್‌ಗೆ ನೀಡಲಾಗಿದೆ. ಶೇ 90ರಷ್ಟು ಕೆಲಸ ಮುಗಿದಿದೆ. 370 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 1ನೇ ಘಟಕವನ್ನು ಕಾರ್ಯಾಚರಣೆಗೆ ಅಣಿಗೊಳಿಸುವುದಕ್ಕಾಗಿ ಪ್ರಯೋಗ ಮಾಡುವ ವೇಳೆಯಲ್ಲೇ ಈ ಅವಘಡ ಸಂಭವಿಸಿದೆ’ ಎಂದು ಕೆಪಿಸಿಎಲ್ ಪ್ರತಿನಿಧಿಯೊಬ್ಬರು ಹೇಳಿದರು.

‘ತ್ವರಿತವಾಗಿ ಕಾರ್ಯಾಚರಣೆ ಆರಂಭಿಸುವ ಉದ್ದೇಶದಿಂದ ಎಂಜಿನಿಯರ್‌ಗಳು ಹಾಗೂ ಉದ್ಯೋಗಿಗಳು ದಿನದ 24 ಗಂಟೆಯೂ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದರು. ನಸುಕಿನ 3.30ರ ಸುಮಾರಿಗೆ 20ಕ್ಕೂ ಹೆಚ್ಚು ಮಂದಿ 1ನೇ ಘಟಕದಲ್ಲಿದ್ದರು. ಅದೇ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು.’

‘ಸ್ಥಾವರ ಬಳಿಯೇ ಇದ್ದ ಅಗ್ನಿನಂದಕ ವಾಹನಗಳ ಮೂಲಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ವಾಹನಗಳಲ್ಲಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.ಎಲ್ಲರಿಗೂ ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದೂ ಪ್ರತಿನಿಧಿ ಹೇಳಿದರು.

ತನಿಖೆ ನಡೆಸಿ ವರದಿ ಸಲ್ಲಿಕೆ; ಸ್ಥಾವರದಲ್ಲಿ ಸ್ಫೋಟ ಸಂಭವಿಸಿದಾಗ ದೊಡ್ಡ ಶಬ್ದ ಬಂದಿತ್ತು. ಗಾಬರಿಗೊಂಡ ಸ್ಥಳೀಯರು ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕದ ದಳದ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು. ಸ್ಥಾವರಕ್ಕೆ ಬಂದ ಅಗ್ನಿಶಾಮಕದ ದಳದ ಸಿಬ್ಬಂದಿ, ಪೂರ್ತಿ ಪ್ರಮಾಣದಲ್ಲಿ ಬೆಂಕಿ ನಂದಿಸಿದರು.

‘ನಾವು ಬರುವ ಮುನ್ನವೇ ಶೇ 90ರಷ್ಟು ಬೆಂಕಿಯನ್ನು ಆರಿಸಲಾಗಿತ್ತು. ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ತನಿಖೆ ಕೈಗೊಂಡು ವರದಿ ಸಿದ್ಧಪಡಿಸಿ ಹಿರಿಯ ಅಧಿಕಾರಿಗಳಿಗೆ ನೀಡಲಾಗುವುದು’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದರು.

'ಸ್ಫೋಟಕ್ಕೆ ನಿಖರ ಕಾರಣ ಗೊತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಅವರು ವರದಿ ಬಂದ ನಂತರವೇ ಕಾರಣ ತಿಳಿಯಲಿದೆ' ಎಂದು ಕೆಪಿಸಿಎಲ್ ಪ್ರತಿನಿಧಿ ಹೇಳಿದರು. ಸ್ಫೋಟ ಸಂಬಂಧ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೇಶ ನಿರ್ಬಂಧ: ಸ್ಫೋಟ ಉಂಟಾಗುತ್ತಿದ್ದಂತೆ ಸ್ಥಾವರದೊಳಗೆ ಪ್ರವೇಶ ನಿರ್ಬಂಧಿಸಲಾಯಿತು. ಸುದ್ದಿ ಮಾಡಲು ತೆರಳಿದ ಮಾಧ್ಯಮದವರಿಗೂ ಪ್ರವೇಶ ನಿರಾಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.