ADVERTISEMENT

ಮ್ಯಾಚ್ ಫಿಕ್ಸಿಂಗ್‌: ಶಿಕ್ಷೆಯೇ ಅಂತಿಮ ಪರಿಹಾರವಲ್ಲ: ಅಂಪೈರ್‌ ಸೈಮನ್‌ ಟಾಫೆಲ್‌

'ಆಟಗಾರರಲ್ಲಿ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ’

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:44 IST
Last Updated 10 ನವೆಂಬರ್ 2019, 19:44 IST
   

ಬೆಂಗಳೂರು: ‘ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡು ತಪ್ಪು ಮಾಡಿದ, ಭ್ರಷ್ಟಾಚಾರದಲ್ಲಿ ಪಾಲ್ಗೊಂಡ ಕ್ರಿಕೆಟ್‌ ಆಟಗಾರರಿಗೆ ಶಿಕ್ಷೆ ನೀಡುವ ಬದಲು, ಶಿಕ್ಷಣ ನೀಡಬೇಕು. ಸರಿ–ತಪ್ಪು ತಿಳಿಸಿಕೊಡಬೇಕು. ಅವರಿಗೆ ಶಿಕ್ಷೆ ವಿಧಿಸಿ, ಜೈಲಿಗೆ ಕಳುಹಿಸಿರುವುದರಿಂದ ಮ್ಯಾಚ್‌ಫಿಕ್ಸಿಂಗ್‌ನಂತಹ ಅಕ್ರಮಗಳು ಕೊನೆಗೊಳ್ಳುವುದಿಲ್ಲ...’

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಮಯೋಚಿತ ತೀರ್ಪುಗಳಿಂದ ಗಮನ ಸೆಳೆದಿರುವ ಅಂಪೈರ್‌ ಸೈಮನ್‌ ಟಾಫೆಲ್‌ ಅವರ ಅಭಿಪ್ರಾಯವಿದು.

ನಗರದಲ್ಲಿ ಭಾನುವಾರ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಅವರು ಮಾತನಾಡಿದರು. ಕೆಪಿಎಲ್‌ ಟೂರ್ನಿಯಲ್ಲಿಯೂ ಮ್ಯಾಚ್‌ಫಿಕ್ಸಿಂಗ್‌ನಂತಹ ಪ್ರಕರಣಗಳು ಹೆಚ್ಚುತ್ತಿದೆ ಎಂಬ ಹಿನ್ನೆಲೆಯಲ್ಲಿ ಆಟದಲ್ಲಿ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ADVERTISEMENT

‘ಆಟವನ್ನು ಮತ್ತು ಅಂಪೈರ್‌ ಪಾತ್ರವನ್ನು ಗೌರವಿಸುವುದರ ಜೊತೆಗೆ, ನಮ್ಮ ಪರಂಪರೆಯನ್ನು ಕಾಪಾಡುವಂತಹ ಮೌಲ್ಯಗಳು ಆಟಗಾರನಲ್ಲಿರಬೇಕು. ಒಬ್ಬ ಕ್ರಿಕೆಟಿಗನಾಗಿ ನಾವು ಹೇಗೆ ನಡೆದುಕೊಳ್ಳಬೇಕು, ನಮ್ಮ ಕರ್ತವ್ಯವೇನು ಎಂಬುದನ್ನು ತಿಳಿದಿರಬೇಕು’ ಎಂದು ವಿಶ್ಲೇಷಿಸಿದರು.

‘ಯಾವುದು ಸ್ವೀಕಾರಾರ್ಹವಾದುದು, ಯಾವುದು ಅಲ್ಲ ಎಂಬುದರ ಅರಿವಿರಬೇಕು. ಒಬ್ಬ ಕ್ರಿಕೆಟ್ ಪಟು ಉತ್ತಮ ಆಟಗಾರನಾಗುವ ಜೊತೆಗೆ, ಉತ್ತಮ ವ್ಯಕ್ತಿಯಾಗಿಯೂ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಭಾರತದಲ್ಲೇ ಅನೇಕ ವ್ಯಕ್ತಿಗಳನ್ನು ಉದಾಹರಿಸಬಹುದು‘ ಎಂದರು.

ಆಟ ಪರಿಪೂರ್ಣವಲ್ಲ:‘ಯಾವುದೇ ಆಟ ಪರಿಪೂರ್ಣವಲ್ಲ. ಚೆಂಡು ಸಂಪೂರ್ಣ ಗೋಳಾಕಾರವಾಗಿದೆಯೇ ಎಂದರೆ ಅದಕ್ಕೆ ಉತ್ತರ ಇಲ್ಲ ಎಂದೇ ಹೇಳಬೇಕಾಗುತ್ತದೆ. ಯಾವುದೇ ಪಿಚ್‌ ಅತ್ಯುತ್ತಮವಾಗಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅಂಪೈರ್‌ಗಳು ನೀಡುವ ತೀರ್ಪಿನಲ್ಲಿ ವ್ಯತ್ಯಾಸವಾಗಬಹುದು. ಆದರೆ, ಯಾವುದೇ ಒಂದು ತಪ್ಪು ನಿರ್ಣಯ ಪಂದ್ಯದ ಫಲಿತಾಂಶದ ಮೇಲೆ ಸಂಪೂರ್ಣ ಪರಿಣಾಮ ಬೀರುವುದಿಲ್ಲ. ಪ್ರತಿ ಎಸೆತ, ಪ್ರತಿ ರನ್‌ ಕೂಡ ಆಟದಲ್ಲಿ ಮುಖ್ಯವಾಗುತ್ತದೆ’ ಎಂದು ಟಾಫೆಲ್‌ ಹೇಳಿದರು.

ಇಂಗ್ಲೆಂಡ್‌–ನ್ಯೂಜಿಲೆಂಡ್‌ ನಡುವೆ ನಡೆದ ಕಳೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಅಂಪೈರ್‌ ತೀರ್ಪು ಅಸಮರ್ಪಕವಾಗಿತ್ತು. ಎರಡೂ ತಂಡಗಳನ್ನು ವಿಜೇತರಾಗಿ ಘೋಷಿಸಬಹುದಾಗಿತ್ತು ಎಂಬ ಮಾತುಗಳಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

**

ರಾಹುಲ್‌ ದ್ರಾವಿಡ್‌, ಅನಿಲ್‌ ಕುಂಬ್ಳೆ ಅಂತಹ ಕ್ರಿಕೆಟ್‌ ಪಟುಗಳನ್ನು ಇಂದಿನ ಆಟಗಾರರು ಆದರ್ಶವಾಗಿ ಇಟ್ಟುಕೊಳ್ಳಬಹುದು.
–ಸೈಮನ್‌ ಟಾಫೆಲ್‌, ಕ್ರಿಕೆಟ್‌ ಅಂಪೈರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.