ADVERTISEMENT

ಬ್ಲಾಗರ್ ಹತ್ಯೆ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಆರೋಪಿಗೆ ಅಲ್‌ ಖೈದಾ ಜೊತೆಗೂ ನಂಟು

ಅನ್ಸರುಲ್ಹಾ ಬಾಂಗ್ಲಾ ಟೀಮ್ (ಎಬಿಟಿ) ಸದಸ್ಯ * ಅಲ್‌ ಖೈದಾ ಜೊತೆಗೂ ನಂಟು

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:49 IST
Last Updated 8 ಜುಲೈ 2022, 19:49 IST
ಫೈಜಲ್
ಫೈಜಲ್   

ಬೆಂಗಳೂರು: ಬಾಂಗ್ಲಾದೇಶದ ಬ್ಲಾಗರ್ ಅನಂತ್ ವಿಜಯ್ ದಾಸ್ (32) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ‘ಅನ್ಸರುಲ್ಹಾ ಬಾಂಗ್ಲಾ ಟೀಮ್ (ಎಬಿಟಿ)’ ಉಗ್ರ ಸಂಘಟನೆ ಸದಸ್ಯ ಫೈಜಲ್ ಅಹ್ಮದ್, ಏಳು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.

‘ಬಾಂಗ್ಲಾ ನಿವಾಸಿ ಫೈಜಲ್ 2015ರ ಮೇ 12ರಂದು ಅನಂತ್ ವಿಜಯ್‌ ದಾಸ್‌ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಭಾರತಕ್ಕೆ ಅಕ್ರಮವಾಗಿ ನುಸುಳಿ ಬೆಂಗಳೂರಿಗೆ ಬಂದಿದ್ದ. ಬೊಮ್ಮನಹಳ್ಳಿಯಲ್ಲಿ ನೆಲೆಸಿ, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನನ್ನು ಜುಲೈ 1ರಂದು ಬಾಂಗ್ಲಾ ಹಾಗೂ ಕೊಲ್ಕತ್ತ ಪೊಲೀಸರು ಬಂಧಿಸಿ, ಕರೆದೊಯ್ದಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಅನಂತ್ ವಿಜಯ್ ದಾಸ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಬುಲ್ ಹುಸೈನ್, ಮಾಮುನೂರ್ ರಶೀದ್, ಅಬುಲ್ ಖೈರ್ ಹಾಗೂ ರಸೀದ್ ಅಹ್ಮದ್ ಅವರಿಗೆ ಮರಣದಂಡನೆ ಶಿಕ್ಷೆ ಆಗಿತ್ತು. ಒಬ್ಬಾತ ಪುರಾವೆ ಕೊರತೆಯಿಂದ ಖುಲಾಸೆಗೊಂಡಿದ್ದ. ಫೈಜಲ್ ತಲೆಮರೆಸಿಕೊಂಡಿದ್ದ’ ಎಂದು ತಿಳಿಸಿದರು.

ADVERTISEMENT

ಅಲ್‌ ಖೈದಾ ಉಗ್ರ ಸಂಘಟನೆ ನಂಟು: ‘ವೈದ್ಯಕೀಯ ವಿದ್ಯಾರ್ಥಿ ಆಗಿದ್ದ ಫೈಜಲ್, ಬಾಂಗ್ಲಾದ ಮದರಸಾಗಳಲ್ಲಿ ಧರ್ಮದ ಪಾಠ ಮಾಡುತ್ತಿದ್ದ. ಅಲ್‌ ಖೈದಾ ಉಗ್ರ ಸಂಘಟನೆ ಜೊತೆ ಗುರುತಿಸಿಕೊಂಡಿರುವ ಅನ್ಸರುಲ್ಹಾ, ಬಾಂಗ್ಲಾ ಟೀಮ್ (ಎಬಿಟಿ) ಸೇರಿದ್ದ. ಈ ಮೂಲಕ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿದ್ದ’ ಎಂದು ಅಧಿಕಾರಿ ಹೇಳಿದರು.

ಸಾಹೀದ್ ಮಜುಂದಾರ್ ಹೆಸರಿನಲ್ಲಿ ವಾಸ: ‘ಭಾರತಕ್ಕೆ 2015ರಲ್ಲಿ ಅಕ್ರಮವಾಗಿ ನುಸುಳಿದ್ದ ಫೈಜಲ್, ತನ್ನ ಹೆಸರನ್ನು ಸಾಹೀದ್ ಮಜುಂದಾರ್ ಎಂದು ಬದಲಾಯಿಸಿಕೊಂಡಿದ್ದ. ಅದೇ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳೀಯ ವಿಳಾಸ ದಾಖಲೆ, ಪಾಸ್‌‍ಪೋರ್ಟ್, ವಾಹನ ಚಾಲನಾ ಪರವಾನಗಿ ಹಾಗೂ ಇತರೆ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಿದ್ದ’ ಎಂದು ಅಧಿಕಾರಿ ತಿಳಿಸಿದರು.

‘ಅಸ್ಸಾಂನಲ್ಲೂ ಎಬಿಟಿ ತಂಡವನ್ನು ಕಟ್ಟಲು ಮುಂದಾಗಿದ್ದ ಫೈಜಲ್, ಅದಕ್ಕಾಗಿ ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ. ಅವರಿಗೆ ಧರ್ಮದ ಪಾಠ ಮಾಡಿ, ಭಯೋತ್ಪಾದನಾ ಕೃತ್ಯದಲ್ಲಿ ತೊಡಗಲು ಪ್ರಚೋದಿಸುತ್ತಿದ್ದ. ಆತನ ಸುಳಿವು ಪತ್ತೆ ಮಾಡಿದ್ದ ಬಾಂಗ್ಲಾ ಪೊಲೀಸರು, ಅಸ್ಸಾಂನಲ್ಲಿ ಹುಡುಕಾಟ ಆರಂಭಿಸಿದ್ದರು. ಅದು ತಿಳಿಯುತ್ತಿದ್ದಂತೆ ಫೈಜಲ್ ಬೆಂಗಳೂರಿಗೆ ಬಂದು ಬೊಮ್ಮನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಕ್ಯಾಬ್ ಚಾಲಕನಾಗಿ ಕೆಲಸ ಆರಂಭಿಸಿದ್ದ.’

‘ಅಸ್ಸಾಂ ಹಾಗೂ ಬಾಂಗ್ಲಾದೇಶಕ್ಕೆ ಆರೋಪಿ ಆಗಾಗ ಹೋಗಿ ಬರುತ್ತಿದ್ದ. ಇದಕ್ಕಾಗಿ ನಕಲಿ ದಾಖಲೆಗಳನ್ನು ಬಳಸುತ್ತಿದ್ದ. ಆರೋಪಿ ಬೆಂಗಳೂರಿನಲ್ಲಿರುವ ಮಾಹಿತಿಯು ಬಾಂಗ್ಲಾ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳಿಗೆ ಇತ್ತೀಚೆಗೆ ಗೊತ್ತಾಗಿತ್ತು. ಕೋಲ್ಕತ್ತ ಪೊಲೀಸರ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಬಾಂಗ್ಲಾ, ಕೋಲ್ಕತ್ತಾ ಪೊಲೀಸರ ತಂಡಗಳು ನಗರಕ್ಕೆ ಬಂದು ಸ್ಥಳೀಯ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಿ ಕರೆದೊಯ್ದಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.