ADVERTISEMENT

ಬೆಂಗಳೂರು: ‘ತಲಸ್ಸೇಮಿಯಾ’ ಮಕ್ಕಳಿಗಾಗಿ ರಕ್ತದಾನ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ವಿಶಿಷ್ಠವಾಗಿ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 17:05 IST
Last Updated 25 ಜನವರಿ 2026, 17:05 IST
ರಕ್ತದಾನಿಗಳೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶ್ರೀನಿವಾಸ್‌ ಚರ್ಚೆ ನಡೆಸಿದರು
ರಕ್ತದಾನಿಗಳೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶ್ರೀನಿವಾಸ್‌ ಚರ್ಚೆ ನಡೆಸಿದರು   

ಬೆಂಗಳೂರು: ತಲಸ್ಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ರಕ್ತ ನೀಡಲು ವಿಶೇಷ ರಕ್ತದಾನ ಶಿಬಿರವನ್ನು ಬೆಂಗಳೂರು ಉತ್ತರ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸಂಕಲ್ಪ ಇಂಡಿಯಾ ಫೌಂಡೇಷನ್‌ ಸಹಯೋಗದಲ್ಲಿ ನಡೆಸಿದರು.

ದೇಹದಲ್ಲಿ ರಕ್ತ ಉತ್ಪಾದನೆಯ ಕೊರತೆ ಇರುವ ಮಕ್ಕಳಿಗೆ 15–20 ದಿನಗಳಿಗೊಮ್ಮೆ ರಕ್ತ ನೀಡಬೇಕಾಗುತ್ತದೆ. ಬೇಡಿಕೆಯಷ್ಟು ರಕ್ತ ಪೂರೈಕೆ ಇರುವುದಿಲ್ಲ. ದೇಶದಲ್ಲಿ ಸುಮಾರು 2,500 ಮಕ್ಕಳಿಗೆ ರಕ್ತ ಪೂರೈಸುವ ಕೆಲಸವನ್ನು ಸಂಕಲ್ಪ ಇಂಡಿಯಾ ಫೌಂಡೇಷನ್‌ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ಯಶವಂತಪುರ ಸಾರಿಗೆ ಅಧಿಕಾರಿಗಳು ಸ್ಪಂದಿಸಿ ರಕ್ತದಾನ ಶಿಬಿರ ನಡೆಸಿದ್ದಾರೆ ಎಂದು ಫೌಂಡೇಷನ್‌ನ ಮುಖ್ಯಸ್ಥ ನರಸಿಂಹಶಾಸ್ತ್ರಿ ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ. ಶ್ರೀನಿವಾಸ ಪ್ರಸಾದ್‌ ಮಾತನಾಡಿ, ‘ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆಯನ್ನು ಆಚರಿಸಲಾಗುತ್ತಿದೆ. ರಕ್ತವನ್ನು ಅಪಘಾತದ ಮೂಲಕ ರಸ್ತೆಯಲ್ಲಿ ಚೆಲ್ಲಬೇಡಿ. ರಕ್ತದಾನ ಮಾಡುವ ಮೂಲಕ ಜೀವಗಳನ್ನು ರಕ್ಷಿಸಲು ನೆರವಾಗಿ ಎಂದು ಸಂದೇಶ ಸಾರಲು ರಕ್ತದಾನ ಶಿಬಿರ ಮಾಡಲಾಗಿದೆ. ಜೊತೆಗೆ ತಲಸ್ಸೇಮಿಯಾ ಎಂಬ ವಿರಳ ರೋಗದ ಮಕ್ಕಳಿಗೆ ರಕ್ತದ ನೆರವು ನೀಡುವುದು ಕೂಡ ಉದ್ದೇಶವಾಗಿದೆ. 120 ಮಂದಿ ರಕ್ತದಾನ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿದರೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.  

ಮೋಟಾರು ವಾಹನ ನಿರೀಕ್ಷಕರಾದ ವಿಶ್ವನಾಥ ಎನ್‌. ಶೆಟ್ಟರ್‌, ಬಸವರಾಜ್‌ ಆರಾಧ್ಯ,  ಅಮೂಲ್ಯ, ಸಚಿತ ಎನ್‌., ಶೋಭಾರಾಣಿ ಕೆ.ಎಸ್‌. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.