ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ: ಮನೆ ಬಾಗಿಲಿಗೆ ಬರಲಿದ್ದಾರೆ ಬಿಎಲ್‌ಒಗಳು

ನಾಲ್ಕು ದಿನ ವಿಶೇಷ ಆಂದೋಲನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 17:15 IST
Last Updated 23 ಅಕ್ಟೋಬರ್ 2018, 17:15 IST

ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಸಲುವಾಗಿ ಇದೇ 26ರಿಂದ 29ರವರೆಗೆ ವಿಶೇಷ ಆಂದೋಲನ ಏರ್ಪಡಿಸಲು ಬಿಬಿಎಂಪಿ ನಿರ್ಧರಿಸಿದೆ.

‘ಪಾಲಿಕೆಯ 28 ವಿಧಾನ ಸಭಾ ಕ್ಷೇತ್ರಗಳಲ್ಲೂ ಈ ನಾಲ್ಕು ದಿನಗಳಲ್ಲಿ ಬ್ಲಾಕ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿದ್ದಾರೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು’ ಎಂದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ವೀಕ್ಷಕರಾಗಿರುವ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಕೋರಿದರು.

2019ರ ಜ.1ರಂದು 18 ವರ್ಷ ತುಂಬುವವರು ಹೆಸರು ನೋಂದಣಿಗೆ ನಮೂನೆ 6 ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ADVERTISEMENT

ಮತದಾರರ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತದಾನದ ಅವಕಾಶ ಸಿಗುವುದಿಲ್ಲ. ಮತದಾನದ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಅಕ್ಟೋಬರ್‌ 10ರಂದು ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯನ್ನು ಸಾರ್ವಜನಿಕರು ಪರಿಶೀಲಿಸಬೇಕು. ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ, ಅಂತಹವರೂ ನಮೂನೆ 6ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್‌ 30ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪಟ್ಟಿಯಿಂದ ಹೆಸರು ಕೈಬಿಡಬೇಕಿದ್ದರೆ ನಮೂನೆ 7ರಲ್ಲಿ ಅರ್ಜಿ ಸಲ್ಲಿಸಬಹುದು. ಮತದಾರರ ವಿವರ ತಿದ್ದುಪಡಿಗೆ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಬಹುದು. ನಿರ್ದಿಷ್ಟ ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಲಾವಣೆಯಾಗಿದ್ದರೆ, ನಮೂನೆ 8ಎ ಮೂಲಕ ಅರ್ಜಿ ಸಲ್ಲಿಸಿ, ತಿದ್ದುಪಡಿ ಮಾಡಬಹುದು ಎಂದು ಪಾಲಿಕೆಯ ಪ್ರಕಟಣೆ ತಿಳಿಸಿದೆ.

ಸಹಾಯಕ ಮತದಾರರ ನೋಂದಣಾಧಿಕಾರಿಗೊಂದಿಗೆ (ಎಇಆರ್‌ಒ) ಮಂಗಳವಾರ ಸಭೆ ನಡೆಸಿದ ಶಿವಯೋಗಿ ಅವರು ಪಟ್ಟಿ ಪರಿಷ್ಕರಣೆ ಬಗ್ಗೆ ಮಾರ್ಗದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.