ADVERTISEMENT

ಕನ್ನಡ ಕಡೆಗಣನೆ: ಬಿಎಂಆರ್‌ಸಿಎಲ್ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ

ಶಿಸ್ತುಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ಮಾರ್ಗ
ಮೈಸೂರು ರಸ್ತೆ–ಕೆಂಗೇರಿ ಮೆಟ್ರೊ ಮಾರ್ಗ   

ಬೆಂಗಳೂರು: ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯ ಪರದೆಯ ಮೇಲೆ ಇಂಗ್ಲಿಷ್‌ ಮಾತ್ರ ಬಳಸಿ, ಆಡಳಿತ ಭಾಷೆ ಕನ್ನಡವನ್ನು ಕಡೆಗಣಿಸಿದ್ದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇಂತಹ ಲೋಪಕ್ಕೆ ಕಾರಣರಾದ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

‘ರಾಜ್ಯ ಸರ್ಕಾರದಸ್ವಾಮ್ಯಕ್ಕೆ ಬರುವ ಎಲ್ಲ ಸರ್ಕಾರಿ, ಸರ್ಕಾರೇತರ, ಖಾಸಗಿ ಸಂಸ್ಥೆಗಳು ತಮ್ಮ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಮಾಡಬೇಕು ಎಂದು ಈಗಾಗಲೇ ಸಾಕಷ್ಟು ಆದೇಶ, ಸುತ್ತೋಲೆಗಳು ಬಂದಿದ್ದರೂ, ಬಿಎಂಆರ್‌ಸಿಎಲ್‌ ಪದೇ ಪದೇ ಕನ್ನಡವನ್ನು ಕಡೆಗಣಿಸುತ್ತಿದೆ. ಭಾನುವಾರದ ಕಾರ್ಯಕ್ರಮದಲ್ಲಿಯೂ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವುದರ ವಿರುದ್ಧ ಸಾಕಷ್ಟು ಮೌಖಿಕ ಮತ್ತು ಲಿಖಿತ ದೂರುಗಳು ಬಂದಿವೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಆಡಳಿತದಲ್ಲಿ ಕನ್ನಡವನ್ನು ಬಳಸುವಂತೆ ಈ ಹಿಂದೆ ನಡೆದ ಪರಿಶೀಲನಾ ಸಭೆಗಳಲ್ಲಿಯೂ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಖುದ್ದು ಭೇಟಿ ಮಾಡಿಯೂ ಆಡಳಿತದಲ್ಲಿ ಶೇ 100ರಷ್ಟು ಕನ್ನಡ ಬಳಸುವಂತೆ ಸೂಚಿಸಲಾಗಿತ್ತು. ಆದಾಗ್ಯೂ, ನಿಗಮದ ವರ್ತನೆ ಖಂಡನಾರ್ಹ. ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು’ ಎಂದು ನಾಗಾಭರಣ ಒತ್ತಾಯಿಸಿದ್ದಾರೆ.

ನಾನೇ ಹೊಣೆ: ‘ಸಮಾರಂಭದಲ್ಲಿಎಲ್ಲ ಫಲಕಗಳು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇದ್ದವು. ಆದರೆ, ಮುಖ್ಯ ವೇದಿಕೆಯ ಹಿಂದೆ ಹಾಕಲಾಗಿದ್ದ ಪರದೆಯಲ್ಲಿ ಮಾತ್ರ ಇಂಗ್ಲಿಷ್ ಇತ್ತು. ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಈ ತಪ್ಪಿಗೆ ನಾನೇ ಹೊಣೆ. ಆಗಿರುವ ತಪ್ಪಿಗೆ ವಿಷಾದ ವ್ಯಕ್ತಪಡಿಸುತ್ತೇನೆ. ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸುತ್ತೇನೆ. ತಪ್ಪನ್ನು ಮನ್ನಿಸಬೇಕು’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.