ADVERTISEMENT

ಅಂಜುಂ ಪರ್ವೇಜ್‌ಗೆ ‘ನಮ್ಮ ಮೆಟ್ರೊ’ ಸಾರಥ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 16:36 IST
Last Updated 14 ಜುಲೈ 2021, 16:36 IST
ಅಂಜುಂ ಪರ್ವೇಜ್‌
ಅಂಜುಂ ಪರ್ವೇಜ್‌   

ಬೆಂಗಳೂರು: ‘ನಮ್ಮ ಮೆಟ್ರೊ’ದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್‌ ಅಧಿಕಾರಿ ಅಂಜುಂ ಪರ್ವೇಜ್‌ ನೇಮಕಗೊಂಡಿದ್ದಾರೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವದ ಮೇರೆಗೆ, ಕೇಂದ್ರ ಸರ್ಕಾರ ಬುಧವಾರ ಈ ಕುರಿತು ಆದೇಶ ಹೊರಡಿಸಿದೆ. ಆ ಮೂಲಕ, ಮೂರೇ ತಿಂಗಳಲ್ಲಿ ನಿಗಮವು ಹೊಸ ವ್ಯವಸ್ಥಾಪಕ ನಿರ್ದೇಶಕರನ್ನು ಕಂಡಂತಾಗಿದೆ.

ಕರ್ನಾಟಕ ಕೇಡರ್‌ನ 1994ರ ಬ್ಯಾಚ್‌ ಅಧಿಕಾರಿಯಾಗಿರುವ ಪರ್ವೇಜ್‌, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ, ಜಲಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರುವ ಅಂಜುಂ ಪರ್ವೇಜ್‌, ಬಿಎಂಆರ್‌ಸಿಎಲ್‌ನ ಏಳನೇ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ADVERTISEMENT

ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಜಯ್ ಸೇಠ್ ಅವರು ಕೇಂದ್ರದ ಹಣಕಾಸು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಬಡ್ತಿ ಹೊಂದಿದ ನಂತರ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ಬಿಎಂಆರ್‌ಸಿಎಲ್‌ನ ಹೊಣೆ ನೀಡಲಾಗಿತ್ತು.

ಮೊದಲೇ ಮಾಹಿತಿ ನೀಡಿ: ‘ನಮ್ಮ ಮೆಟ್ರೊ’ದ ಎರಡನೇ ಹಂತದ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿದಂತಿರುವ ಕೇಂದ್ರ ಸರ್ಕಾರ, ಇನ್ನು ಮುಂದೆ, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡುವ ಮುನ್ನ, ತನ್ನ ಗಮನಕ್ಕೆ ತರಲೇಬೇಕು ಎಂದು ರಾಜ್ಯಸರ್ಕಾರಕ್ಕೆ ಸೂಚನೆ ನೀಡಿದೆ. ಅವರಿಗೆ ಯಾವುದೇ ಇತರೆ ಅಥವಾ ಹೆಚ್ಚುವರಿ ಹೊಣೆ ನೀಡಬಾರದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.

ಯಾವುದೇ ಅಧಿಕಾರಿಯಾದರೂ, ನಿಗಮದ ಒಳ–ಹೊರಗನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಆರು ತಿಂಗಳಿಂದ ಒಂದು ವರ್ಷವಾದರೂ ಸಮಯ ಬೇಕಾಗುತ್ತದೆ. ಆದರೆ, ಹಲವು ಬಾರಿ, ವರ್ಷದೊಳಗೆ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗುತ್ತಿತ್ತು. ಇದು ನಿಗಮದ ಬೆಳವಣಿಗೆ ಮತ್ತು ಕಾಮಗಾರಿಯ ಪ್ರಗತಿಯ ಮೇಲೂ ಪರಿಣಾಮ ಬೀರುತ್ತಿತ್ತು. ಕೇಂದ್ರ ಸರ್ಕಾರದ ಈ ಸೂಚನೆ ಸಕಾಲಿಕ ಮತ್ತು ಸ್ವಾಗತಾರ್ಹ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.