ADVERTISEMENT

ಯಶವಂತಪುರ: ಪಾದಚಾರಿ ಮೇಲ್ಸೇತುವೆಗೆ ಕೊನೆಗೂ ಮುಹೂರ್ತ

7 ಕಡೆ ಸೇತುವೆ ನಿರ್ಮಾಣಕ್ಕೆ ಟೆಂಡರ್‌ ಆಹ್ವಾನಿಸಿದ ಬಿಎಂಆರ್‌ಸಿಎಲ್‌

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 19:42 IST
Last Updated 5 ಜನವರಿ 2021, 19:42 IST
ಯಶವಂತಪುರ
ಯಶವಂತಪುರ   

ಬೆಂಗಳೂರು: ಯಶವಂತಪುರದಲ್ಲಿ ನಮ್ಮ ಮೆಟ್ರೊ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ನಡುವೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕೆಂಬ ಬಹುವರ್ಷಗಳ ಬೇಡಿಕೆ ಸಾಕಾರಗೊಳ್ಳಲು ಕೊನೆಗೂ ಕಾಲ ಕೂಡಿ ಬಂದಿದೆ. ಇಲ್ಲಿನ ಎರಡು ಸೇತುವೆಗಳು ಸೇರಿದಂತೆ ಒಟ್ಟು ಏಳು ಕಡೆ ಇಂತಹಈ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಈ ಪಾದಚಾರಿ ಮೇಲ್ಸೇತುವೆಗಳ ನಿರ್ಮಿಸುವ ₹ 12.15 ಕೋಟಿ ವೆಚ್ಚದ ಈ ಕಾಮಗಾರಿಗಳಿಗೆ ನಿಗಮವು ಟೆಂಡರ್‌ ಆಹ್ವಾನಿಸಿದೆ.

‌‘ನಾಗಸಂದ್ರದಲ್ಲಿ ನಿರ್ಮಾಣವಾಗುತ್ತಿರುವ ಪಾದಚಾರಿ ಮೇಲ್ಸೇತುವೆಯನ್ನು ಹಾಗೂ ಮೆಟ್ರೊ ನಿಲ್ದಾಣದ ಕಾನ್‌ಕೋರ್ಸ್‌ ಹಂತವನ್ನು ಜೋಡಿಸಲು ಹೊಸ ಸೇತುವೆ ನಿರ್ಮಾಣವಾಗಲಿದೆ. ದಾಸರಹಳ್ಳಿಯಲ್ಲಿ ರಸ್ತೆ ದಾಟಲು ಸೇತುವೆ ನಿರ್ಮಾಣವಾಗಲಿದೆ. ಉಳಿದ ನಾಲ್ಕು ಸೇತುವೆಗಳು ನಮ್ಮ ಮೆಟ್ರೊ ಎರಡನೇ ಹಂತದಲ್ಲಿ ನಿರ್ಮಾಣವಾಗುವ ಮೆಟ್ರೊ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಲಿವೆ. ಕೆಂಗೇರಿ ಬಸ್‌ನಿಲ್ದಾಣದ ಪಕ್ಕದ ಮೈಲಸಂದ್ರ ಮೆಟ್ರೊ ನಿಲ್ದಾಣದಲ್ಲಿ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಾಣವಾಗಲಿದೆ. ಜ್ಞಾನಭಾರತಿಯಲ್ಲೂ ಮೆಟ್ರೊ ನಿಲ್ದಾಣ ಮತ್ತು ರೈಲು ನಿಲ್ದಾಣ ಸಂಪರ್ಕಿಸುವ ಸೇತುವೆ ನಿರ್ಮಾಣವೂ ಈ ಕಾಮಗಾರಿಗಳಲ್ಲಿ ಸೇರಿದೆ’ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ಮಾಹಿತಿ ನೀಡಿದರು.

ADVERTISEMENT

ಈ ಎರಡು ನಿಲ್ದಾಣಗಳು ನಮ್ಮ ಮೆಟ್ರೊ ಮೈಸೂರು ರಸ್ತೆ ವಿಸ್ತರಿತ ಮಾರ್ಗದಲ್ಲಿವೆ. ಇನ್ನೊಂದು ಪಾದಚಾರಿ ಮೇಲ್ಸೇತುವೆ ನಾಗಸಂದ್ರ– ಬಿಐಇಸಿ ವಿಸ್ತರಿತ ಮಾರ್ಗದಲ್ಲಿ ಚಿಕ್ಕಬಿದಿರಕಲ್ಲುವಿನಲ್ಲಿ ತಲೆ ಎತ್ತಲಿದೆ.

ಯಶವಂತಪುರ ಪಾದಚಾರಿ ಮೇಲ್ಸೇತುವೆಗಳಲ್ಲಿ ಒಂದು ಮಟ್ರೊ ನಿಲ್ದಾಣದ ಎರಡು ಕಾನ್‌ಕೋರ್ಸ್‌ಗಳನ್ನು ರೈಲ್ವೆ ನಿಲ್ದಾಣ ಆರನೇ ಫ್ಲ್ಯಾಟ್‌ಫಾರ್ಮ್‌ಗೆ ಜೋಡಿಸಲಿದೆ. ಇನ್ನೊಂದು ರೈಲ್ವೆ ನಿಲ್ದಾಣದ ಫ್ಲ್ಯಾಟ್‌ಫಾರ್ಮ್‌ಗಳ ಮೇಲೆ ಹಾದುಹೋಗಲಿದೆ.

‘ಯಶವಂತಪುರದಲ್ಲಿ ರೈಲ್ವೆನಿಲ್ದಾಣ ಮತ್ತು ನಮ್ಮ ಮೆಟ್ರೊ ನಿಲ್ದಾಣವನ್ನು ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು ಮೊದಲು ಪೂರ್ಣಗೊಳಿಸುತ್ತೇವೆ. ಇನ್ನೊಂದು ಪಾದಚಾರಿ ಮೇಲ್ಸೇತುವೆಯನ್ನು ಸದಾ ಚಟುವಟಿಕೆಯಿಂದ ಕೂಡಿದ ರೈಲ್ವೆ ಫ್ಲ್ಯಾಟ್‌ಫಾರ್ಮ್‌ಗಳ ಮೇಲೆ ನಿರ್ಮಿಸಬೇಕಿದೆ. ಹಾಗಾಗಿ ಅದಕ್ಕೆ ಸ್ವಲ್ಪ ಹೆಚ್ಚು ಸಮಯ ತಗುಲಬಹುದು’ ಎಂದು ಚೌಹಾಣ್‌ ತಿಳಿಸಿದರು.

ಈ ಕಾಮಗಾರಿಗಳ ಟೆಂಡರ್ ಅರ್ಜಿಗಳನ್ನು ಫೆ 12ರಂದು ತೆರೆಯಲಾಗುತ್ತದೆ. ಉಕ್ಕಿನ ರಚನೆಗಳನ್ನು ಬಳಸಿ ನಿರ್ಮಿಸಲಾಗುವ ಈ ಮೇಲ್ಸೇತುವೆಗಳ ಕಾಮಗಾರಿ ಇನ್ನು ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಬಹುದು ಎಂಬ ನಿರೀಕ್ಷೆಯನ್ನು ಅಧಿಕಾರಿಗಳು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.