ADVERTISEMENT

ವೆಲ್ಲಾರ ಜಂಕ್ಷನ್‌: ಕಾಮಗಾರಿ ಸ್ಥಗಿತ

ಆಲ್‌ ಸೇಂಟ್ಸ್‌ ಚರ್ಚ್‌ –ರಕ್ಷಣಾ ಇಲಾಖೆ ನಡುವೆ ಭೂ ಮಾಲೀಕತ್ವ ವಿವಾದ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:21 IST
Last Updated 14 ಸೆಪ್ಟೆಂಬರ್ 2019, 20:21 IST

ಬೆಂಗಳೂರು:‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯ ಗೊಟ್ಟಿಗೆರೆ–ನಾಗವಾರ ಸುರಂಗ ಮಾರ್ಗದ ವೆಲ್ಲಾರ ಜಂಕ್ಷನ್‌ ನಿಲ್ದಾಣ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿದೆ.

ಇಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಸೇನೆಯು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ಆದೇಶಿಸಿದೆ. ಈ ಜಾಗದ ಮಾಲೀಕತ್ವದ ಕುರಿತು ರಕ್ಷಣಾ ಇಲಾಖೆ ಮತ್ತು ಇಲ್ಲಿನ ಆಲ್‌ ಸೇಂಟ್ಸ್‌ ಚರ್ಚ್‌ ನಡುವೆ ವಿವಾದವಿದೆ.

ವೆಲ್ಲಾರ ಜಂಕ್ಷನ್‌ ನಿಲ್ದಾಣ ನಿರ್ಮಿಸಲು ಹೊಸೂರು ರಸ್ತೆಯಲ್ಲಿ 7,426 ಚದರ ಮೀಟರ್‌ ಜಾಗವನ್ನು ನಿಗಮವು ಸ್ವಾಧೀನ ಪಡಿಸಿಕೊಂಡಿದೆ. ಇದು ಚರ್ಚ್‌ಗೆ ಸೇರಿದ ಜಾಗ ಎಂದು ಹೇಳಲಾಗಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯು ಚರ್ಚ್‌ಗೆ ಸುಮಾರು ₹60 ಕೋಟಿ ಪರಿಹಾರವನ್ನು ನೀಡಿದೆ.

ADVERTISEMENT

ಸೇನಾ ಸಿಬ್ಬಂದಿ ಗಸ್ತು: ಕಾಮಗಾರಿ ಮುಂದುವರಿಸದಂತೆ ಸೇನೆ ಬಿಎಂಆರ್‌ಸಿಎಲ್‌ ಸೂಚನೆ ನೀಡಿದೆ. ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸೇನೆಯ ಸಶಸ್ತ್ರ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ‘ನಿಲ್ದಾಣ ನಿರ್ಮಾಣಕ್ಕಾಗಿ ಫಾತಿಮಾ ಬೇಕರಿ, ಟಾಮ್ಸ್‌ ರೆಸ್ಟೋರೆಂಟ್‌, ಬಿಪಿಸಿಎಲ್‌ ಪೆಟ್ರೋಲ್‌ ಬಂಕ್‌ ಹಾಗೂ ಶೂಲೆ ವೃತ್ತದಲ್ಲಿನ ಒಂದೆರಡು ಕಟ್ಟಡಗಳನ್ನು ನೆಲಸಮಗೊಳಿಸಿ, ಬ್ಯಾರಿಕೇಡ್‌ ಹಾಕಲಾಗಿದೆ. ಅಷ್ಟರಲ್ಲಿ, ಕಾನೂನಾತ್ಮಕ ತೊಡಕು ಎದುರಾಗಿದ್ದರಿಂದಾಗಿ ರಕ್ಷಣಾ ಇಲಾಖೆಯ ಕೆ ಆ್ಯಂಡ್‌ ಕೆ (ಕರ್ನಾಟಕ ಮತ್ತು ಕೇರಳ) ಸಬ್‌ ಕಮಾಂಡ್‌ ಕಚೇರಿಯು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಹೇಳಿದೆ. ಸೇನಾ ಸಿಬ್ಬಂದಿಯೂ ಇಲ್ಲಿ ಗಸ್ತು ತಿರುಗುತ್ತಿದ್ದಾರೆ. ಹಾಗಾಗಿ ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ’ ಎಂದು ನಿಗಮದ ಅಧಿಕಾರಿ ಹೇಳಿದರು.

ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌, ‘ವೆಲ್ಲಾರ ಜಂಕ್ಷನ್‌, ಲ್ಯಾಂಗ್‌ಫೋರ್ಡ್‌ ಟೌನ್‌ ಮತ್ತು ಎಂ.ಜಿ. ರಸ್ತೆ ಬಳಿ ಸುರಂಗ ಮಾರ್ಗದ ನಿಲ್ದಾಣಕ್ಕಾಗಿ ರಕ್ಷಣಾ ಇಲಾಖೆ ಜಾಗ ಬಳಸಿಕೊಳ್ಳುತ್ತಿದ್ದೇವೆ. ಈ ಪೈಕಿ ವೆಲ್ಲಾರ ಜಂಕ್ಷನ್‌ ಬಳಿ ರಕ್ಷಣಾ ಇಲಾಖೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.