ಬೆಂಗಳೂರು: ಬಿಎಂಟಿಸಿ ಬಸ್ ಅಪಘಾತಗಳಲ್ಲಿ 2024ರಿಂದ ಇಲ್ಲಿಯವರೆಗೆ 80 ಜನರು ಮೃತಪಟ್ಟಿದ್ದಾರೆ ಎಂಬುದನ್ನು ಬೆಂಗಳೂರು ಸಂಚಾರ ಪೊಲೀಸರ (ಬಿಟಿಪಿ) ಅಂಕಿಅಂಶಗಳು ದೃಢಪಡಿಸಿವೆ.
2024ರಲ್ಲಿ ಬಿಎಂಟಿಸಿ ಬಸ್‌ಗಳು ಒಳಗೊಂಡ 190 ರಸ್ತೆ ಅಪಘಾತಗಳು ವರದಿಯಾಗಿವೆ. 42 ಜನರು ಮೃತಪಟ್ಟಿದ್ದು, 155 ಜನರು ಗಾಯಗೊಂಡಿದ್ದರು. ಈ ವರ್ಷ 121 ಅಪಘಾತಗಳು ಸಂಭವಿಸಿದ್ದು, 38 ಜನರು ಮೃತಪಟ್ಟಿದ್ದಾರೆ. 91 ಜನರು ಗಾಯಗೊಂಡಿದ್ದಾರೆ.
ಇದೇ ಅವಧಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಒಳಗೊಂಡ ಅಪಘಾತಗಳಲ್ಲಿ 20 ಜನರು ಮೃತಪಟ್ಟಿದ್ದಾರೆ. 32 ಜನರು ಗಾಯಗೊಂಡಿದ್ದಾರೆ. ಖಾಸಗಿ ಬಸ್‌ಗಳು ಒಳಗೊಂಡ ಅಪಘಾತಗಳಲ್ಲಿ 48 ಜನರು ಸಾವಿಗೀಡಾಗಿದ್ದಾರೆ. 203 ಜನರು ಗಾಯಗೊಂಡಿದ್ದಾರೆ ಎಂದು ದತ್ತಾಂಶಗಳಿಂದ ಗೊತ್ತಾಗಿದೆ.
ಈ ಬಾರಿ ಆಗಸ್ಟ್‌ನಲ್ಲಿ ಇಬ್ಬರು ಮಕ್ಕಳು ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ನಾಲ್ವರು ದ್ಚಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದವರು. ಭಾನುವಾರ, ಕೆ.ಆರ್. ಮಾರುಕಟ್ಟೆ ಬಳಿಯ ಎಸ್‌ಜೆಪಿ ರಸ್ತೆಯಲ್ಲಿ 11 ವರ್ಷದ ಬಾಲಕ ತನ್ನ ಚಿಕ್ಕಪ್ಪನೊಂದಿಗೆ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದ. ಬಿಎಂಟಿಸಿ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಸ್ಕೂಟರ್ ಸ್ಕಿಡ್ ಆಗಿ ಪಲ್ಟಿಯಾಗಿದ್ದರಿಂದ ಬಾಲಕ ಬಸ್‌ನ ಚಕ್ರದ ಅಡಿಗೆ ಬಿದ್ದು ಮೃತಪಟ್ಟಿದ್ದ.
ಈ ತಿಂಗಳು ಸಂಭವಿಸಿದ ಐದು ಮಾರಕ ಅಪಘಾತಗಳಲ್ಲಿ ನಾಲ್ಕರಲ್ಲಿ ಬಿಎಂಟಿಸಿ ಚಾಲಕರ ತಪ್ಪಿರಲಿಲ್ಲ. ಎಲೆಕ್ಟ್ರಿಕ್ ಬಸ್‌ನಲ್ಲಿ ಉಂಟಾದ ಅಪಘಾತ ಮಾತ್ರ ಬಸ್ ಚಾಲಕನ ನಿಯಂತ್ರಣ ತಪ್ಪಿ ಉಂಟಾಗಿದ್ದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕರಿಗೆ ತರಬೇತಿ ನೀಡಲಾಗಿದೆ. ಘಟಕಗಳಲ್ಲಿ ‘ಬದುಕು ಬದುಕಿಸು’ ಹಾಗೂ ಬಸ್ ನಿಲ್ದಾಣಗಳಲ್ಲಿ ‘ಬಸ್ ಬಂತು ಬಸ್’ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲಾಗಿದೆ. ಚಾಲಕರ ಒತ್ತಡ ಕಡಿಮೆ ಮಾಡಲು 2000 ಟ್ರಿಪ್‌ಗಳ ಸಮಯ ಪರಿಷ್ಕರಣೆ ಮಾಡಿ ರನ್ನಿಂಗ್ ಟೈಮ್ ಹೆಚ್ಚಿಸಲಾಗಿದೆ. ಅಪಘಾತರಹಿತ ಚಾಲನೆ ಮಾಡಿದವರಿಗೆ ಚಿನ್ನ, ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಆದರೂ ಅಪಘಾತ ನಡೆದರೆ ಮೊದಲ ಬಾರಿಯಾಗಿದ್ದರೆ ಚಾಲಕ ಅಮಾನತು, ಎರಡನೇ ಬಾರಿ ಅಪಘಾತ ಮಾಡಿದರೆ ಕೆಲಸದಿಂದ ವಜಾ ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಬಿಎಂಟಿಸಿ ಬಸ್‌ಗಳು ದೊಡ್ಡ ವಾಹನಗಳಾಗಿದ್ದು, ತಕ್ಷಣ ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದಾಗಿ ಕೆಳಗೆ ಬಿದ್ದವರು ಚಕ್ರದಡಿಗೆ ಸಿಲುಕುತ್ತಿದ್ದಾರೆ’ ಎಂದು ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.