ಬೆಂಗಳೂರು: ಬಸ್‌ಗಳ ಮೇಲೆ ಗರಿಷ್ಠ ಪ್ರಮಾಣದ ಜಾಹೀರಾತು ಪ್ರದರ್ಶಿಸುವ ಮೂಲಕ ಬಿಎಂಟಿಸಿಯು ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆರ್ಥಿಕ ಸಂಕಷ್ಟದಿಂದ ಹೊರ ಬರಲು 3,400 ಬಸ್‌ಗಳ ಮೇಲೆ ಜಾಹೀರಾತು ಪ್ರದರ್ಶಿಸಲು ಅವಕಾಶ ನೀಡಿದ್ದು, ಇದರಿಂದ ವಾರ್ಷಿಕ ₹67.8 ಕೋಟಿ ಆದಾಯ ಬರಲಿದೆ.
ಬಿಎಂಟಿಸಿಯ ಎಸಿ ಬಸ್‌ಗಳಲ್ಲಿ ಮಾತ್ರ ಜಾಹೀರಾತು ಪ್ರದರ್ಶನಕ್ಕೆ ಹಿಂದೆ ಅವಕಾಶ ನೀಡಿತ್ತು. ಈಗ ಸಾಮಾನ್ಯ ಬಸ್‌ಗಳಲ್ಲೂ ಜಾಹೀರಾತು ಪ್ರದರ್ಶಿಸಲು ಬಿಎಂಟಿಸಿ ಅನುಮತಿ ನೀಡಿದೆ. ಬಸ್‌ನ ಮುಂಭಾಗ ಹಾಗೂ ಹಿಂಭಾಗದ ಗಾಜು ಹಾಗೂ ಕಿಟಕಿಗಳನ್ನು ಹೊರತುಪಡಿಸಿ ಉಳಿದೆಲ್ಲ ಜಾಗದಲ್ಲಿ ಜಾಹೀರಾತು ಅಳವಡಿಸಲು ಸ್ಥಳಾವಕಾಶ ಒದಗಿಸಿದೆ. ಸಾಮಾನ್ಯ ಬಸ್‌ನಲ್ಲಿ 350 ಚದರ ಅಡಿ ಹಾಗೂ ಎಸಿ ಬಸ್‌ನಲ್ಲಿ 430 ಚದರ ಅಡಿ ಸ್ಥಳಾವಕಾಶ ಇದೆ. ಒಂದು ತಿಂಗಳಿಗೆ ಸಾಮಾನ್ಯ ಬಸ್‌ನಲ್ಲಿ ಜಾಹೀರಾತು ಪ್ರದರ್ಶಿಸಲು ₹14,887 ಹಾಗೂ ಎಸಿ ಬಸ್‌ಗೆ ₹29,801 ನಿಗದಿಪಡಿಸಲಾಗಿದೆ.
‘400 ಎಸಿ ಬಸ್‌ಗಳಲ್ಲಿ ಜಾಹೀರಾತು ಪ್ರದರ್ಶನದಿಂದ ಒಂದು ತಿಂಗಳಿಗೆ ₹1.19 ಕೋಟಿ ಹಾಗೂ 3 ಸಾವಿರ ಸಾಮಾನ್ಯ ಬಸ್‌ಗಳಿಂದ ₹4.46 ಕೋಟಿ ಸೇರಿದಂತೆ ಒಟ್ಟು ₹5.65 ಕೋಟಿ ಆದಾಯ ಬಿಎಂಟಿಸಿಗೆ ಹರಿದು ಬರಲಿದೆ’ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಸ್‌ನಲ್ಲಿ ಜಾಹೀರಾತಿನ ಅಳವಡಿಕೆಯು 350 ಚದರ ಅಡಿ ಮೀರುವಂತಿಲ್ಲ. ಬಿಎಂಟಿಸಿ ಲಾಂಛನ, ವಾಹನ ನೋಂದಣಿ ಸಂಖ್ಯೆ, ಡಿಪೊ ವಿವರ ಪ್ರದರ್ಶನಕ್ಕೆ ಅಡ್ಡಿಯಾಗಬಾರದು. ಜಾಹೀರಾತಿಗೆ ಬಳಸುವ ಸ್ಟಿಕ್ಕರ್‌ಗಳು ಮತ್ತು ವಸ್ತುಗಳು ಪರಿಸರ ಸ್ನೇಹಿಯಾಗಿರಬೇಕು. ಜಾಹೀರಾತುಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿಯೇ ಪ್ರದರ್ಶಿಸಬೇಕು. ಅವಧಿ ಪೂರ್ಣಗೊಂಡ ನಂತರ ಎಲ್ಲ ಬಸ್‌ಗಳಿಗೆ ಬಣ್ಣ ಬಳಿದು ಕೊಡಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ವಿವರಿಸಿದರು.
‘ಬಸ್‌ಗಳಲ್ಲಿ ಜಾಹೀರಾತು ಪ್ರದರ್ಶನ ಮಾಡಲು 2024ರ ಡಿಸೆಂಬರ್‌ನಲ್ಲಿ ಟೆಂಡರ್ ಆಹ್ವಾನಿಸಲಾಗಿತ್ತು. ಇದರಲ್ಲಿ ಹೆಚ್ಚು ಬಿಡ್ ಸಲ್ಲಿಸಿದ್ದ ಸಾಯಿ ಜಾಹೀರಾತು ಏಜೆನ್ಸಿಯೊಂದಿಗೆ ಮೂರು ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಪರಿಸರಕ್ಕೆ ಮಾರಕವಾಗುವ, ಮದ್ಯಪಾನ, ಧೂಮಪಾನಕ್ಕೆ ಪ್ರಚೋದಿಸುವ ಜಾಹೀರಾತುಗಳನ್ನು ಪ್ರದರ್ಶಿಸುವಂತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಾಹೀರಾತು ನೀತಿಗಳನ್ನು ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ, ಜಾಹೀರಾತು ಏಜೆನ್ಸಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ನಿರ್ಬಂಧ ವಿಧಿಸಲಾಗಿದೆ’ ಎಂದು ಹೇಳಿದರು.
‘ಜಾಹೀರಾತು ವಿಸ್ತರಿಸುವ ಯೋಜನೆ ಇಲ್ಲ’ ಬಿಎಂಟಿಸಿ ಬಸ್‌ಗಳಲ್ಲಿ ಜಾಹೀರಾತು ಪ್ರದರ್ಶನದಿಂದ ಸಂಸ್ಥೆಗೆ ಲಾಭವಾಗುತ್ತಿದೆ. ಆದರೆ ಈಗ ಪ್ರದರ್ಶಿಸುತ್ತಿರುವ ಜಾಹೀರಾತುಗಳ ಅವಧಿ ಮುಗಿದ ನಂತರ ಇದನ್ನು ವಿಸ್ತರಿಸುವ ಯೋಜನೆ ಇಲ್ಲ. ಬಿಎಂಟಿಸಿ ಬ್ರ್ಯಾಂಡ್‌ಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ನಮ್ಮ ಬಸ್‌ಗಳು ಸಂಚರಿಸಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ವರ್ಷ;ಆದಾಯ 2020–21;₹4.57 ಕೋಟಿ 2021–22;₹11.61ಕೋಟಿ 2022–23;₹19.30ಕೋಟಿ 2023–24;₹17.75ಕೋಟಿ 2024;21.39ಕೋಟಿ ಒಟ್ಟು;₹74.64ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.