ADVERTISEMENT

ಪ್ರತ್ಯೇಕ ಪಥ: ಖಾಸಗಿ ವಾಹನಗಳಿಗೆ ನಿರ್ಬಂಧ

ಟಿನ್‌ ಫ್ಯಾಕ್ಟರಿಯಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ l ನಿಯಮ ಉಲ್ಲಂಘಿಸಿದಲ್ಲಿ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 6:07 IST
Last Updated 16 ನವೆಂಬರ್ 2019, 6:07 IST
ಪ್ರತ್ಯೇಕ ಬಸ್ ಪಥದ ಮಾದರಿ
ಪ್ರತ್ಯೇಕ ಬಸ್ ಪಥದ ಮಾದರಿ   

ಬೆಂಗಳೂರು: ಟಿನ್‌ ಫ್ಯಾಕ್ಟರಿಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಮೀಸಲಿಟ್ಟಿರುವ ಪ್ರತ್ಯೇಕ ಪಥದಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಶುಕ್ರವಾರದಿಂದ ನಿರ್ಬಂಧಿಸಲಾಗಿದೆ.

ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಆದೇಶ ಹೊರಡಿಸಿದ್ದಾರೆ.

‘ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ, ನಗರ ಭೂ ಸಾರಿಗೆ ಇಲಾಖೆ ಹಾಗೂ ಬಿಎಂಟಿಸಿ ಅಧಿಕಾರಿಗಳು ಪ್ರತ್ಯೇಕ ಪಥ ವ್ಯವಸ್ಥೆ ರೂಪಿಸಿದ್ದಾರೆ. ಈ ಮಾರ್ಗದಲ್ಲಿ ಬಸ್‌ಗಳು ತ್ವರಿತವಾಗಿ ಸಂಚರಿಸಲು ಹಾಗೂ ಪ್ರಯಾಣಿಕರು ಬೇಗನೇ ನಿಗದಿತ ಸ್ಥಳಗಳಿಗೆ ತಲುಪಲು ಅನುಕೂಲವಾಗಲೆಂದು ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

‘ಬಸ್‌ಗಳ ಪ್ರತ್ಯೇಕ ಪಥವು ಕೆ.ಆರ್‌.ಪುರ, ಎಚ್‌ಎಎಲ್‌, ಎಚ್‌ಎಸ್‌ಆರ್‌ ಲೇಔಟ್ ಹಾಗೂ ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಾದುಹೋಗುತ್ತದೆ. ಅಲ್ಲೆಲ್ಲ ಕೆಲ ಮಾರ್ಪಾಡು ಮಾಡಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.

ಪ್ರತ್ಯೇಕ ಪಥದಲ್ಲಿ ಏಕಮುಖ ಸಂಚಾರ: ಬಸ್‌ಗಳ ಪ್ರತ್ಯೇಕ ಪಥವಿರುವ ರಸ್ತೆ ಕೆಲವೆಡೆ ಏಕಮುಖವಾಗಿ ಸಂಚರಿಸಲು ಖಾಸಗಿ ವಾಹನಗಳಿಗೆ ಅವಕಾಶವಿದೆ. ಈ ಬಗ್ಗೆಯೂ ಆದೇಶದಲ್ಲಿ ತಿಳಿಸಲಾಗಿದೆ.

ಮಾರತ್ತಹಳ್ಳಿ ಮೇಲ್ಸೇತುವೆಯಿಂದ ಎಚ್‌ಡಿಎಫ್‌ಸಿ ಹೋಮ್‌ಲೋನ್ ಕಟ್ಟಡದವರೆಗೆ ಹಾಗೂ ಕಾಡುಬಿಸನಹಳ್ಳಿ ಜಂಕ್ಷನ್‌ವರೆಗೆ, ಸಿಲ್ಕ್‌ಬೋರ್ಡ್‌ ಬಸ್ ನಿಲ್ದಾಣದಿಂದ 14ನೇ ಮುಖ್ಯರಸ್ತೆ ಜಂಕ್ಷನ್‌ವರೆಗೆ, ಅಗರ ಜಂಕ್ಷನ್‌ನಿಂದ ಇಬ್ಬಲೂರು ತಂಗುದಾಣ ಹಾಗೂ ಇತರೆಡೆ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿದೆ.

ತುರ್ತು ಸೇವೆ ವಾಹನಗಳಿಗೆ ಅವಕಾಶ

‘ಬಿಎಂಟಿಸಿ ಬಸ್‌, ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇರಿದಂತೆತುರ್ತು ಸೇವಾ ವಾಹನಗಳಿಗೆ ಮಾತ್ರ ಪ್ರತ್ಯೇಕ ಪಥದಲ್ಲಿ ಸಂಚರಿಸಲು ಅವಕಾಶವಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮಾಸಾಂತ್ಯಕ್ಕೆ ಕಾಮಗಾರಿ ಪೂರ್ಣ

ಪ್ರತ್ಯೇಕ ಬಸ್ ಪಥ ನಿರ್ಮಾಣ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. 18 ಕಿಲೋ ಮೀಟರ್ ರಸ್ತೆಯಲ್ಲಿ 12 ಕಿ.ಮೀ.ಯಲ್ಲಿ ಕಾಮಗಾರಿ ಮುಗಿದಿದೆ. ಇಬ್ಬಲೂರು ಬಳಿಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್ ವರೆಗಿನ ಕಾಮಗಾರಿ ಬಾಕಿ ಇದೆ. ಬಸ್ ಪಥದಲ್ಲಿ ಬೇರೆ ವಾಹನಗಳು ಸಂಚಾರ ಮಾಡಬಾರದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.