ಬೆಂಗಳೂರು: ‘ಬಸ್‌ಗಳಲ್ಲಿ ಸಹಪ್ರಯಾಣಿಕರಿಗೆ ತೊಂದರೆಯಾಗುವಂತೆ ಮೊಬೈಲ್‌ನಲ್ಲಿ ಹಾಡು, ವಾರ್ತೆಗಳನ್ನು ಹಾಕುವಂತಿಲ್ಲ’ ಎಂದು ನಿಯಮ ಇದ್ದರೂ ಜೋರಾಗಿ ಹಾಡು ಹಾಕಿ ಇತರರಿಗೆ ಕಿರಿಕಿರಿ ಉಂಟು ಮಾಡುವುದು ನಿಂತಿಲ್ಲ ಎಂದು ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ನಾನು ಕೆಎಸ್‌ಆರ್‌ಟಿಸಿ ಕೆಂಪು ಬಸ್‌ನಲ್ಲಿ ಆಗಾಗ ಓಡಾಡುತ್ತೇನೆ. ಪ್ರತಿ ಸಾರಿ ಒಬ್ಬರಲ್ಲ ಒಬ್ಬರು ಹಾಡು ಅಥವಾ ರೀಲ್ಸ್‌ಗಳನ್ನು ದೊಡ್ಡ ಧ್ವನಿಯಲ್ಲಿ ಹಾಕಿರುತ್ತಾರೆ. ಶಬ್ದ ಕಡಿಮೆ ಮಾಡಿ ಎಂದರೆ ಕೆಲವರು ಕಡಿಮೆ ಮಾಡುತ್ತಾರೆ. ಇನ್ನೂ ಕೆಲವರು ಜಗಳಕ್ಕೆ ನಿಂತು ಬಿಡುತ್ತಾರೆ. ಹಲವರು ನಾವು ಹೇಳಿದ್ದು ಕೇಳಿಸಿಯೇ ಇಲ್ಲ ಎನ್ನುವಂತೆ ನಡೆದುಕೊಳ್ಳುತ್ತಾರೆ’ ಎಂದು ಉದ್ಯೋಗದ ಕಾರಣ ಸದ್ಯಕ್ಕೆ ಚಲ್ಲಘಟ್ಟದಲ್ಲಿರುವ ಮಂಗಳೂರಿನ ಕುಮುದಾ ನಾಯಕ್ ದೂರಿದರು.
‘ಇಯರ್ ಫೋನ್ ಹಾಕಿಕೊಂಡು ಅವರಿಗೆ ಬೇಕಾದುದನ್ನು ಕೇಳಲಿ, ನೋಡಲಿ. ಅದು ಬಿಟ್ಟು ಎಲ್ಲರಿಗೆ ಕೇಳಿಸುವಂತೆ ಜೋರಾಗಿ ಹಾಡು ಹಾಕಿಕೊಂಡಿರುತ್ತಾರೆ. ಬಸ್ ನಿರ್ವಾಹಕರಲ್ಲಿ ಕೆಲವರು ಬಂದು ಅವರಿಗೆ ತಿಳಿ ಹೇಳುತ್ತಾರೆ. ಅವರು ಅತ್ತ ಹೋದಾಗ ಮತ್ತೆ ಸದ್ದು ಶುರುವಾಗುತ್ತದೆ. ಅಲ್ಲದೇ ಕೆಲವರು ಫೋನ್‌ನಲ್ಲಿ ಮಾತಾಡುವಾಗ ತಾವು ಬಸ್‌ನಲ್ಲಿರುವುದನ್ನು ಮರೆತು ಜೋರಾಗಿ ಮಾತನಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗಿರಬೇಕು ಎಂಬುದೇ ಗೊತ್ತಿಲ್ಲ’ ಎಂದು ಬಸ್ ಪ್ರಯಾಣಿಕರಾದ ಜಯನಗರದ ನಳಿನಿ ತಿಳಿಸಿದರು.
‘ನಿಗಮದ ಬಸ್‌ಗಳಲ್ಲಿ ಮೊಬೈಲ್ ಮೂಲಕ ಜೋರು ಶಬ್ದ ಮಾಡುವುದನ್ನು ನಿರ್ಬಂಧಿಸಿ ನಾಲ್ಕು ವರ್ಷಗಳ ಹಿಂದೆಯೇ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ, ಪ್ರಯಾಣಿಕರಿಗೆ ಕರ್ತವ್ಯ ನಿರತ ಸಿಬ್ಬಂದಿ ತಿಳಿವಳಿಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜೋರು ಶಬ್ದ ಮಾಡದಂತೆ ಮನವಿ ಮಾಡಿದರೂ ಸ್ಪಂದಿಸದೇ ಇದ್ದರೆ ಅಂಥವರನ್ನು ಬಸ್‌ನಿಂದ ಇಳಿಸಲು ಅವಕಾಶವಿದೆ. ಮಾನವೀಯ ದೃಷ್ಟಿಯಿಂದ ನಾವು ಇಳಿಸಲು ಹೋಗುವುದಿಲ್ಲ. ಪ್ರಯಾಣಿಕರು ಇದನ್ನು ಅರ್ಥ ಮಾಡಿಕೊಂಡು ಹಾಡು, ಸದ್ದುಗಳನ್ನು ಕಡಿಮೆ ಮಾಡಿಕೊಳ್ಳಬೇಕು’ ಎಂದು ಕೆಎಸ್‌ಆರ್‌ಟಿಸಿ ನಿರ್ವಾಹಕ ಗೋಪಾಲ ತಿಳಿಸಿದರು.
‘ಇತ್ತೀಚೆಗೆ ಪ್ರಯಾಣಿಕರಲ್ಲಿ ಜಾಗೃತಿ ಬಂದಿದೆ. ರಾತ್ರಿ ಪ್ರಯಾಣದಲ್ಲಿ ಜೋರು ಸದ್ದು ಮಾಡುವುದು ಕಡಿಮೆಯಾಗಿದೆ. ಹಗಲು ಪ್ರಯಾಣದಲ್ಲಿ ಈಗಲೂ ಕೆಲವರು ಜೋರು ಶಬ್ದ ಇಟ್ಟುಕೊಂಡು ಎಫ್‌ಎಂ ಕೇಳುವುದು, ವಿಡಿಯೊ ನೋಡುವುದು, ಸಿನಿಮಾ ನೋಡುವುದು, ಹಾಡು ಕೇಳುವುದು, ರೀಲ್ಸ್ ನೋಡುವುದು ಮಾಡುತ್ತಿದ್ದಾರೆ’ ಎಂದು ನಿರ್ವಾಹಕರೊಬ್ಬರು ತಿಳಿಸಿದರು.
‘ಇಯರ್ ಫೋನ್ ಬಳಸಿ’
ಬಸ್‌ಗಳಲ್ಲಿ ಮೊಬೈಲ್‌ನಲ್ಲಿ ಜೋರಾಗಿ ಸದ್ದು ಮಾಡಿದರೆ ಕ್ರಮ ಕೈಗೊಳ್ಳಲು ಕಾನೂನಿನಡಿ ಅವಕಾಶ ಇದೆ. ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಇಯರ್‌ಫೋನ್ ಬಳಸಿಕೊಂಡು ಕೇಳಿಸಿಕೊಳ್ಳಲಿ. ತೊಂದರೆ ನೀಡಿದರೆ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲು ನಿಗಮದ ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.