ADVERTISEMENT

ಇಂದು ರಸ್ತೆಗಿಳಿಯಲಿವೆ ಎರಡು ಸಾವಿರ ಬಿಎಂಟಿಸಿ ಬಸ್: ಪಾಸ್‌ ಕಡ್ಡಾಯ

ನಿಂತು ಪ್ರಯಾಣಿಸಲು ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 19 ಮೇ 2020, 2:07 IST
Last Updated 19 ಮೇ 2020, 2:07 IST
ಕಾರ್ಯಾಚರಣೆಗೆ ಸಜ್ಜುಗೊಂಡಿರುವ ಬಿಎಂಟಿಸಿ ಬಸ್‌ಗಳು ಪ್ರಜಾವಾಣಿ ಚಿತ್ರ 
ಕಾರ್ಯಾಚರಣೆಗೆ ಸಜ್ಜುಗೊಂಡಿರುವ ಬಿಎಂಟಿಸಿ ಬಸ್‌ಗಳು ಪ್ರಜಾವಾಣಿ ಚಿತ್ರ    

ಬೆಂಗಳೂರು: ಬಸ್‌ ಸಂಚಾರಕ್ಕೆ ಇದ್ದ ನಿರ್ಬಂಧವನ್ನು ತೆಗೆದು ಹಾಕಿರುವುದರಿಂದ ಮೊದಲ ಹಂತವಾಗಿ ಬಿಎಂಟಿಸಿಯ ಎರಡು ಸಾವಿರ ಬಸ್‌ಗಳು ಮಂಗಳವಾರ ಸಂಚಾರ ನಡೆಸಲಿವೆ. ಆದರೆ, ದಿನದ, ವಾರದ ಅಥವಾ ತಿಂಗಳ ಪಾಸ್‌ ಹೊಂದಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಇದೆ ಎಂದು ಬಿಎಂಟಿಸಿ ಹೇಳಿದೆ.

ದಿನದ ಪಾಸ್‌ಗೆ ₹70, ವಾರದ ಪಾಸ್‌ಗೆ ₹300 ಹಾಗೂ ಮಾಸಿಕ ಪಾಸುಗಳಿಗೆ ಈ ಮೊದಲಿದ್ದ ದರವನ್ನೇ ಮುಂದುವರಿಸಲಾಗಿದೆ. ವ್ಯಕ್ತಿಗತ ಅಂತರವನ್ನು ಕಾಪಾಡುವ ಉದ್ದೇಶದಿಂದ ಪಾಸ್‌ ಹೊಂದಿದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.

‘ಬಸ್‌ಗಳ ಕಾರ್ಯಾಚರಣೆಗೆ ಸಂಸ್ಥೆ ಸಜ್ಜಾಗಿದೆ. ಈಗಾಗಲೇ 15 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯ ಆರೋಗ್ಯ ಪರೀಕ್ಷೆ (ಥರ್ಮಲ್‌ ಸ್ಕ್ರೀನಿಂಗ್) ಮಾಡಲಾಗಿದೆ. ಮಂಗಳವಾರದ ವೇಳೆಗೆ ಇನ್ನೂ ಹೆಚ್ಚು ಸಿಬ್ಬಂದಿಯ ಪರೀಕ್ಷೆ ನಡೆಸಿದ ನಂತರ ಕರ್ತವ್ಯಕ್ಕೆ ನಿಯೋಜಿಸಲಾಗುವುದು’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೆಚ್ಚು ಜನರು ಸಂಚರಿಸುವ ಅಥವಾ ದಟ್ಟಣೆಯ ಪ್ರದೇಶಗಳಲ್ಲಿ ಮೊದಲು ಸೇವೆ ನೀಡಲಾಗುವುದು. ಕ್ರಮೇಣವಾಗಿ ಉಳಿದ ಭಾಗಗಳಿಗೆ ಸೇವೆ ವಿಸ್ತರಿಸಲಾಗುವುದು’ ಎಂದರು.

ಸಿಬ್ಬಂದಿ ಸುರಕ್ಷತೆ: ‘ನಿತ್ಯ ಚಾಲಕ ಮತ್ತು ನಿರ್ವಾಹಕರ ದೇಹದ ತಾಪಮಾನ ಪರೀಕ್ಷೆ ಮಾಡಲಾಗುವುದು. ಎಲ್ಲರಿಗೂ ಮುಖ–ಕೈಗವಸು, ಸ್ಯಾನಿಟೈಸರ್‌ ವಿತರಿಸಲಾಗುವುದು ಹಾಗೂ ಎಲ್ಲ ಬಸ್‌ಗಳನ್ನು ನಿತ್ಯ ಸೋಂಕು ಮುಕ್ತಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.

‘ನಗದು ವ್ಯವಹಾರ ಕಡಿಮೆಗೊಳಿಸಲು ಮಾಸಿಕ ಹಾಗೂ ವಾರದ ಪಾಸ್‌ಗಳನ್ನು ಹೆಚ್ಚು ವಿತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.

ನಿಂತು ಪ್ರಯಾಣಿಸುವಂತಿಲ್ಲ: ‘ಬಸ್‌ಗಳ ಆಸನ ಸಾಮರ್ಥ್ಯ ಎಷ್ಟಿದೆಯೋ ಅಷ್ಟು ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸಲು ಅವಕಾಶ ನೀಡಲಾಗುವುದಿಲ್ಲ’ ಎಂದು ಶಿಖಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.