ADVERTISEMENT

ಬಿಎಂಟಿಸಿ: ವಿದ್ಯಾರ್ಥಿ ಪಾಸ್ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:15 IST
Last Updated 13 ಜೂನ್ 2019, 20:15 IST
   

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಕನಿಷ್ಠ ₹100ರಿಂದ ₹250ರಷ್ಟು ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಬಿಎಂಟಿಸಿ ಗುರುವಾರ ಬಿಡುಗಡೆ ಮಾಡಿರುವ ಹೊಸ ದರ ಪಟ್ಟಿ ಅನ್ವಯಪ್ರೌಢಶಾಲೆ ವಿದ್ಯಾರ್ಥಿಗಳ ಪಾಸಿನ ದರ ₹100, ಪದವಿ ಪೂರ್ವ ವಿದ್ಯಾರ್ಥಿಗಳ ಪಾಸಿನ ದರ ₹150 ಹೆಚ್ಚಳವಾಗಿದೆ.

ADVERTISEMENT

ವೃತ್ತಿಪರ ಕಾಲೇಜು ವಿದ್ಯಾರ್ಥಿಗಳ ಪಾಸ್ ದರ ಅತಿ ಹೆಚ್ಚು ₹250, ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಪಾಸ್‌ ದರ ₹240, ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಸಿನ ದರ ₹200 ಹೆಚ್ಚಳವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಎಲ್ಲಾ ವಿದ್ಯಾರ್ಥಿಗಳಿಗೂ ದರ ಹೆಚ್ಚಳದಲ್ಲಿ ವಿನಾಯಿತಿ ದೊರೆತಿದೆ.ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪಾಸ್ ಶುಲ್ಕ ₹200 ಇದ್ದು, ಅದನ್ನು ಏರಿಕೆ ಮಾಡಿಲ್ಲ.

ಹಲವು ವರ್ಷಗಳಿಂದ ಪಾಸ್ ದರ ಏರಿಕೆ ಮಾಡಿರಲಿಲ್ಲ. ಹೀಗಾಗಿ, ಕೆಎಸ್‌ಆರ್‌ಟಿಸಿ ನೀಡಿದ ಮಾರ್ಗಸೂಚಿಯಂತೆ ದರ ಏರಿಕೆ ಮಾಡಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ವಿ. ಪ್ರಸಾದ್ ತಿಳಿಸಿದರು.

ಬಿಎಂಟಿಸಿಯ www.mybmtc.com/www.mybmtc.karnataka.gov.inನಲ್ಲಿ ಪಾಸಿನ ಅರ್ಜಿ ಮತ್ತು ಮಾಹಿತಿ ಲಭ್ಯವಿದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಬಿಎಂಟಿಸಿ ತಿಳಿಸಿದೆ.

ಪದವಿ, ವೃತ್ತಿಪರ, ತಾಂತ್ರಿಕ, ವೈದ್ಯಕೀಯ, ಸಂಜೆ ಕಾಲೇಜಿನ, ಪಿಎಚ್‌ಡಿ ವಿದ್ಯಾರ್ಥಿಗಳ ಪಾಸ್ ವಿತರಣೆ ವ್ಯವಸ್ಥೆ ಬಗ್ಗೆ ಶೀಘ್ರವೇ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದೆ.

‘ಪಾಸ್ ದರ ಏರಿಕೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ, ಈಗ ಮಾತು ತಪ್ಪಿ, ನಮಗೆ ಅನ್ಯಾಯ ಮಾಡಿದ್ದಾರೆ’ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.