ADVERTISEMENT

‘ಅನಧಿಕೃತ ಎ–ಖಾತಾ’: ಕ್ರಮಕ್ಕೆ ಮೀನಮೇಷ

ಬಿಬಿಎಂಪಿ: ಅಕ್ರಮ ಬೆಳಕಿಗೆ ಬಂದರೂ ಅಧಿಕಾರಿಗಳ ವಿರುದ್ಧ ಕ್ರಮವಿಲ್ಲ

ಪ್ರವೀಣ ಕುಮಾರ್ ಪಿ.ವಿ.
Published 26 ಏಪ್ರಿಲ್ 2022, 18:50 IST
Last Updated 26 ಏಪ್ರಿಲ್ 2022, 18:50 IST

ಬೆಂಗಳೂರು: ಅನಧಿಕೃತ ನಿವೇಶನಗಳಿಗೆ ಈಗಾಗಲೇ ಅಕ್ರಮವಾಗಿ ಎ ಖಾತಾ ಮಾಡಿಸಿಕೊಂಡಿರುವ ಸಾವಿರಾರು ಪ್ರಕರಣಗಳು ಬಿಬಿಎಂಪಿ ವ್ಯಾಪ್ತಿಯಲ್ಲಿವೆ. ಈ ಅಕ್ರಮಕ್ಕೆ ಕೈಜೋಡಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಿಲ್ಲ. ‘ಅಕ್ರಮ ಎ ಖಾತಾ’ಗಳನ್ನು ರದ್ದುಪಡಿಸುವ ಪ್ರಯತ್ನವೂ ಆಗಿಲ್ಲ.

ಬಿ–ಖಾತಾ ಹೊಂದಿರುವವರಿಂದ ದಂಡ ಕಟ್ಟಿಸಿಕೊಂಡು ಅವರಿಗೆ ಖಾತಾ/ ಸ್ವತ್ತಿನ ಗುರುತು ಸಂಖ್ಯೆ ನೀಡುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಈ ಸಭೆಯಲ್ಲಿ ‘ಅಕ್ರಮ ಎ ಖಾತಾ’ ಕುರಿತು ಯಾವ ನಿಲುವು ತಳೆಯಬೇಕು ಎಂಬ ಬಗ್ಗೆ ಚರ್ಚೆಯೇ ಆಗಿಲ್ಲ.

2009ರ ಬಿಬಿಎಂಪಿ ಆಸ್ತಿ ತೆರಿಗೆ ನಿಯಮಗಳ ಪ್ರಕಾರ ಸ್ವತ್ತಿನ ಮೌಲ್ಯಮಾಪನ ನಡೆಸಿ, ಅದರ ಮಾಲೀಕ/ನಿವಾಸಿಯಿಂದ ಸಂಗ್ರಹಿಸುವ ತೆರಿಗೆ ವಿವರಗಳನ್ನು ನಮೂನೆ ‘ಎ’ನಲ್ಲಿ ಹಾಗೂ ಮೌಲ್ಯಮಾಪನ ನಡೆಸದ ಸ್ವತ್ತಿನ ತೆರಿಗೆ ವಿವರಗಳನ್ನು ನಮೂನೆ ‘ಬಿ’ನಲ್ಲಿ ನಮೂದಿಸಬೇಕು. ಆದರೆ, ವ್ಯವಸ್ಥೆಯ ಲೋಪಗಳನ್ನೇ ದುರ್ಬಳಕೆ ಮಾಡಿಕೊಂಡು ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಎ ಖಾತಾ ಮಾಡಿಸಿಕೊಟ್ಟಿದ್ದಾರೆ. ಕೆಲವು ಕಡೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಂಜೂರಾತಿ ಪಡೆಯದೇ ನಿರ್ಮಿಸಿದ ಬಡಾವಣೆಗಳಲ್ಲಿ ಕೆಲವು ನಿವೇಶನಗಳಿಗೆ ಬಿಬಿಎಂಪಿ ಅಧಿಕಾರಿಗಳು ಬಿ ಖಾತಾ ನೀಡಿದ್ದಾರೆ. ಅದೇ ಬಡಾವಣೆಯಲ್ಲೇ ಕೆಲವು ನಿವೇಶನಗಳಿಗೆ ಎ ಖಾತಾ ನೀಡಿರುವ ಉದಾಹರಣೆಗಳಿವೆ.

ADVERTISEMENT

ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ಹಾಗೂ ಮಹದೇವಪುರ ವಲಯಗಳಲ್ಲಿ ಬಿ ಖಾತಾ ಹೊಂದಿರುವವರಿಗೆ ಅಕ್ರಮವಾಗಿ ಎ ಖಾತಾ ಮಾಡಿಕೊಟ್ಟಿರುವ ವಿಚಾರ ಬಿಬಿಎಂಪಿ ಕೌನ್ಸಿಲ್‌ನಲ್ಲಿ ಅನೇಕ ಸಲ ಚರ್ಚೆಗೆ ಗ್ರಾಸವಾಗಿತ್ತು. ಆದರೂ ಈ ಕುರಿತು ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕ್ರಮಕೈಗೊಂಡಿಲ್ಲ.

‘ಅನಧಿಕೃತ ನಿವೇಶನಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವ ವಿಚಾರದಲ್ಲೂ ಸರ್ಕಾರ ಸ್ಪಷ್ಟ ನಿರ್ಧಾರ ತಳೆಯಬೇಕು. ಇಲ್ಲದಿದ್ದರೆ ಈ ಹಿಂದೆ ನಡೆದ ಅಕ್ರಮಗಳೆಲ್ಲವೂ ಮುಚ್ಚಿಹೋಗಲಿವೆ. ಅಷ್ಟೇ ಅಲ್ಲ; ಬಿ ಖಾತಾಗಳಿಗೆ ವಿಧಿಸುವ ದಂಡದ ರೂಪದಲ್ಲಿ ಬಿಬಿಎಂಪಿಗೆ ಬರಬೇಕಾದ ಭಾರಿ ಪ್ರಮಾಣದ ವರಮಾನವೂ ಕೈತಪ್ಪಲಿದೆ. ಇದು ಭ್ರಷ್ಟಾಚಾರಕ್ಕೂ ಕಾರಣವಾಗಲಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ವಿವರಿಸಿದರು.

ನಗರದಲ್ಲಿ 170 ಅನಧಿಕೃತ ಬಡಾವಣೆಗಳಿರುವುದನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುರುತಿಸಿದೆ. ಬಡಾವಣೆಯ ಸ್ವರೂಪದಲ್ಲೇ ಇಲ್ಲದ ಪ್ರದೇಶಗಳಲ್ಲಿ ಭೂಪರಿವರ್ತನೆ ಆಗದ ನಿವೇಶನಗಳ ಬಗ್ಗೆ ಖಚಿತ ಮಾಹಿತಿ ಬಿಡಿಎ ಬಳಿಯಾಗಲೀ, ಬಿಬಿಎಂಪಿ ಬಳಿಯಾಗಲೀ ಇಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ 8 ಲಕ್ಷಕ್ಕೂ ಅಧಿಕ ಬಿ ಖಾತಾಗಳಿವೆ ಎಂದು ಅಂದಾಜಿಸಲಾಗಿತ್ತು.

‘ಬಿಬಿಎಂಪಿ ಅಂದಾಜು ಮಾಡಿದಷ್ಟು ಪ್ರಮಾಣದಲ್ಲಿ ಈಗ ಬಿ ಖಾತಾಗಳು ಉಳಿದಿಲ್ಲ.ಅನೇಕ ಕಡೆ ಕಂದಾಯ ವಿಭಾಗದ ಅಧಿಕಾರಿಗಳು ಲಂಚ ಪಡೆದು, ಬಿ ಖಾತಾ ಹೊಂದಿದ್ದ ಜಾಗಕ್ಕೆ ಸಮೀಪದ ಎ ಖಾತೆಯ ಉಪಸಂಖ್ಯೆ ನೀಡಿ ಸಕ್ರಮ ಮಾಡಿಕೊಟ್ಟಿದ್ದಾರೆ. ಹಾಗಾಗಿ ಬಿ ಖಾತಾ ಹೊಂದಿರುವ ನಿವೇಶನಗಳಿಗೆ ದಂಡ ವಿಧಿಸಿ ಭಾರಿ ವರಮಾನ ಗಳಿಸುವ ಪ್ರಯತ್ನ ಫಲನೀಡುವುದಿಲ್ಲ’ ಎಂದು ಬಿಬಿಎಂಪಿಯ ಮಾಜಿ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.