ಬೆಂಗಳೂರು: ಡಿ.ಸಿ. ಬಿಲ್‌ಗಳ ಪಾವತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆಯಲ್ಲಿ (ಐಎಫ್‌ಎಂಎಸ್) ಅಪ್‌ಲೋಡ್ ಮಾಡಿರದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು, ಯಾರಿಗೆ ಬಿಲ್ ಪಾವತಿಸಲಾಗಿದೆ ಎಂಬ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಬುಧವಾರ ನಮೂದಿಸಿದ್ದಾರೆ.
ಬಿಬಿಎಂಪಿಯು 2022ರ ಏಪ್ರಿಲ್ 1ರ ನಂತರ ಪಾವತಿ ಮಾಡಿರುವ ಕೆಲವು ಬಿಲ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ದಾಖಲಾತಿಗಳನ್ನು ಐಎಫ್‌ಎಂಎಸ್‌ನಲ್ಲಿ(https://accounts.bbmpgov.in/vsswb/#) ಅಪ್‌ಲೋಡ್ ಮಾಡದ ಬಗ್ಗೆ ‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ‘ಪಾವತಿ ತಂತ್ರಾಂಶದಲ್ಲಿ ದಾಖಲಾತಿ ನಾಪತ್ತೆ!’ ಎಂಬ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು.
ಕೆಲವು ಡಿ.ಸಿ ಬಿಲ್‌ಗಳನ್ನು ಯಾರಿಗೆ ಪಾವತಿಸಲಾಗಿದೆ, ಬಿಲ್ಲಿನ ಪ್ರತಿ, ಅದಕ್ಕೆ ಎಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲಾಗಿದೆ... ಮುಂತಾದ ಯಾವುದೇ ವಿವರಗಳೂ ಐಎಫ್‌ಎಂಎಸ್‌ನಲ್ಲಿ ಮಂಗಳವಾರ ಲಭ್ಯ ಇರಲಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಐಎಫ್‌ಎಂಎಸ್ ಅನ್ನು ಪರಿಶೀಲಿಸಿದಾಗ, ಡಿ.ಸಿ ಬಿಲ್‌ಗಳನ್ನು ಯಾರಿಗೆ ಪಾವತಿಸಲಾಗಿದೆ ಎಂಬ ವಿವರಗಳನ್ನು ನಮೂದಿಸಿರುವುದು ಹಾಗೂ ₹4.5 ಲಕ್ಷ ಮೊತ್ತದ ಕೆಲವು ಬಿಲ್‌ಗಳಿಗೆ ಸಂಬಂಧಿಸಿ ಒಂಟಿ ಮನೆಯ ಫೋಟೊ ಅಪ್‌ಲೋಡ್ ಮಾಡಿರುವುದು ಕಂಡು ಬಂತು. ಆದರೆ, ಅಪ್‌ಲೋಡ್ ಮಾಡಲಾದ ಬಹುತೇಕ ಫೋಟೋಗಳಲ್ಲೂ ಒಂಟಿ ಮನೆಯ ಒಂದು ಭಾಗವನ್ನಷ್ಟೇ ತೋರಿಸಲಾಗಿದೆ. ಕೆಲವು ಬಿಲ್‌ಗಳಿಗೆ ಸಂಬಂಧಿಸಿ ಹಳೆಯ ಪೋಟೋಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಅನೇಕ ಡಿ.ಸಿ.ಬಿಲ್‌ಗಳಿಗೆ ಸಂಬಂಧಿಸಿದ ವಿವರಗಳು ಈಗಲೂ ಅಪೂರ್ಣವಾಗಿಯೇ ಇವೆ.
ಬಿಲ್ ಪಾವತಿಯಲ್ಲಿ ಪಾರದರ್ಶಕತೆ ತರಲು ಐಎಫ್‌ಎಂಎಸ್ ರೂಪಿಸಲಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕವೂ ಅಧಿಕಾರಿಗಳು ಪಾರದರ್ಶಕತೆ ಕಾಯ್ದುಕೊಳ್ಳದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.