ADVERTISEMENT

ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿ ಮೃತದೇಹ ಪತ್ತೆ

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 21:18 IST
Last Updated 19 ಜೂನ್ 2022, 21:18 IST
ರಾಜಕಾಲುವೆಯಲ್ಲಿ ಪತ್ತೆಯಾದ ಮಿಥುನ್ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರು
ರಾಜಕಾಲುವೆಯಲ್ಲಿ ಪತ್ತೆಯಾದ ಮಿಥುನ್ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದರು   

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ ಮಿಥುನ್ (27) ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.

ಬಸವನಪುರ ವಾರ್ಡ್‌ನ ಗಾಯಿತ್ರಿ ಬಡಾವಣೆಯಲ್ಲಿ ಮಳೆಯಿಂದಾಗಿ ರಾಜಕಾಲುವೆ ತುಂಬಿ ಹರಿದಿತ್ತು. ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ತಮ್ಮ ಬೈಕ್‌ ಹೊರಗೆ ಎಳೆಯಲು ಹೋಗಿ ಮಿಥುನ್ ಕೊಚ್ಚಿಕೊಂಡು ಹೋಗಿದ್ದರು.

ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ಸಿಬ್ಬಂದಿ, ಶುಕ್ರವಾರ ರಾತ್ರಿಯಿಂದಲೇ ಮಿಥುನ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

ADVERTISEMENT

ರಾಜಕಾಲುವೆಯುದ್ದಕ್ಕೂ ದೋಣಿಯಲ್ಲಿ ಸಾಗಿ, ಪ್ರತಿಯೊಂದು ಸ್ಥಳದಲ್ಲೂ ಪರಿಶೀಲಿಸಿದರು. ಶನಿವಾರ ರಾತ್ರಿವರೆಗೂ ಮಿಥುನ್ ಸುಳಿವು ಸಿಕ್ಕಿರಲಿಲ್ಲ. ಕತ್ತಲಾಗಿದ್ದರಿಂದ, ಕಾರ್ಯಾ ಚರಣೆ ಸ್ಥಗಿತಗೊಳಿಸಲಾಗಿತ್ತು.

ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ಪುನಃ ಆರಂಭಿಸಿದ್ದ ಸಿಬ್ಬಂದಿ, ಶೋಧ ಮುಂದುವರಿಸಿದ್ದರು. ಘಟನಾ ಸ್ಥಳದಿಂದ 1.5 ಕಿ.ಮೀ ದೂರದಲ್ಲಿರುವ ರಾಜಕಾಲುವೆ ಸ್ಥಳದಲ್ಲಿ ಮಿಥುನ್ ಮೃತದೇಹ ಪತ್ತೆಯಾಯಿತು. ಅದನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು.

‘ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅದರಂತೆ ಗ್ರಾಮದ ಮಿಥುನ್, ನಗರದ ಕಂಪನಿಯೊಂ ದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಗಾಯಿತ್ರಿ ಬಡಾವಣೆ ಯಲ್ಲಿ ಸ್ನೇಹಿತರ ಜೊತೆ ವಾಸವಿದ್ದರು. ರಾಜಕಾಲುವೆ ಪಕ್ಕ ತಮ್ಮ ಬೈಕ್ ನಿಲ್ಲಿಸಿದ್ದರು. ಶುಕ್ರವಾರ ರಾತ್ರಿ 12.30ರ ಸುಮಾರಿಗೆ ಮಳೆ ವೇಳೆ ಕಾಲುವೆ ಗೋಡೆ ಕುಸಿದು ಬೈಕ್‌ ತೇಲಿ ಹೋಗುತ್ತಿತ್ತು. ಬೈಕ್ ಹಿಡಿದು ಎಳೆದುಕೊಳ್ಳಲು ಮುಂದಾಗಿದ್ದ ಮಿಥುನ್, ಕಾಲುವೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.