ADVERTISEMENT

ಕೆರೆ ಸ್ವಚ್ಛತೆಗೆ ಇಳಿದ ಮೀನುಗಾರರು

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:58 IST
Last Updated 20 ಮೇ 2019, 19:58 IST
ಕೆರೆಯಲ್ಲಿನ ಜೊಂಡು ತೆಗೆಯುವ ಕಾರ್ಯ ಸೋಮವಾರ ಆರಂಭಗೊಂಡಿತು
ಕೆರೆಯಲ್ಲಿನ ಜೊಂಡು ತೆಗೆಯುವ ಕಾರ್ಯ ಸೋಮವಾರ ಆರಂಭಗೊಂಡಿತು   

ಬೊಮ್ಮನಹಳ್ಳಿ: ಮೀನುಗಾರಿಕೆಗೆ ಅಡ್ಡಿಯಾಗಿರುವ ಹುಳಿಮಾವು ಕೆರೆಯಲ್ಲಿನ ಜೊಂಡನ್ನು ತೆಗೆಯುವ ಕಾರ್ಯವನ್ನು ಶ್ರೀಗಂಗಾ ಮೀನುಗಾರರ ಸಹಕಾರ ಸಂಘ ಆರಂಭಿಸಿದೆ.

ಬನ್ನೇರುಘಟ್ಟ ರಸ್ತೆ ಬದಿಯ ಈ ಕೆರೆಯನ್ನು ಸ್ವಚ್ಛಗೊಳಿಸಲು ಸಂಘವು ಪಾಲಿಕೆ ಮತ್ತು ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿತ್ತು. ಅದಕ್ಕೆ ಸ್ಪಂದನೆ ಸಿಗದ ಕಾರಣ ಕೆರೆ ಶುಚಿಗೊಳಿಸಲು ಮುಂದಾಗಿದೆ.

ಕೆರೆಯ ಮಾಲಿನ್ಯದಿಂದಾಗಿ ಸೊಳ್ಳೆಗಳ ಕಾಟವು ಹೆಚ್ಚಿದೆ. ದುರ್ನಾತವೂ ಬೀರುತ್ತಿದೆ.

ADVERTISEMENT

‘20 ವರ್ಷಗಳಿಂದ ಈ ಕೆರೆಯಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಇದರಿಂದ ಅನೇಕರಿಗೆ ಉದ್ಯೋಗ ಸಿಕ್ಕಿತ್ತು. ಕಡಿಮೆ ದರದಲ್ಲೂ ಇಲ್ಲಿ ಮೀನು ಮಾರಾಟ ಮಾಡಲಾಗುತ್ತಿತ್ತು. ಈ ಜೊಂಡಿನಿಂದಾಗಿ ಮೀನುಗಾರಿಕೆ ನಿಲ್ಲಿಸಲಾಗಿದೆ’ ಎಂದು ಸಂಘದ ಸದಸ್ಯರೊಬ್ಬರು ತಿಳಿಸಿದರು.

ಮೀನುಗಾರಿಕಾ ಇಲಾಖೆ ನಗರ ಜಿಲ್ಲಾ ಸಹಾಯಕ ನಿರ್ದೇಶಕಕುಮಾರಸ್ವಾಮಿ ಅವರು ಕೆರೆ ಸ್ವಚ್ಛತಾ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ,‘ಕೆರೆಗೆ ಕೊಳಚೆನೀರು ಸೇರುತ್ತಿದೆ. ಹಾಗಾಗಿ ಜೊಂಡು ಬೆಳೆಯುತ್ತಿದೆ. ಇದರಲ್ಲಿ ಮೀನುಗಳು ಇದ್ದಲ್ಲಿ ನೀರು ಸ್ವಚ್ಛವಾಗಿರುತ್ತದೆ’ ಎಂದು ಹೇಳಿದರು.

ಶ್ರೀಗಂಗಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಬಿಳೇಕಹಳ್ಳಿ ನಾರಾಯಣ,‘ಜೊಂಡು ತೆಗೆಯಲು ಸದ್ಯ ₹ 5 ಲಕ್ಷ ಮೀಸಲಿಟ್ಟಿದ್ದೇವೆ. ವೆಚ್ಚ ಹೆಚ್ಚಾದರೂ ಭರಿಸುತ್ತೇವೆ’ ಎಂದು ತಿಳಿಸಿದರು.

*

ಅಂಕಿ–ಅಂಶ

140 ಎಕರೆ-ಕೆರೆಯ ವಿಸ್ತೀರ್ಣ

₹ 5 ಲಕ್ಷ - ಜೊಂಡು ತೆಗೆಯಲು ಮೀಸಲಿಟ್ಟ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.