ADVERTISEMENT

ಬುಕ್ ಬ್ರಹ್ಮ: ಸಾಹಿತ್ಯ ಉತ್ಸವ ಆ.8 ರಿಂದ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 16:27 IST
Last Updated 20 ಜುಲೈ 2025, 16:27 IST
ಬುಕ್ ಬ್ರಹ್ಮ ಸಾಹಿತ್ಯೋತ್ಸವದ ಲೋಗೊ
ಬುಕ್ ಬ್ರಹ್ಮ ಸಾಹಿತ್ಯೋತ್ಸವದ ಲೋಗೊ   

ಬೆಂಗಳೂರು: ಬುಕ್ ಬ್ರಹ್ಮ ಸಂಸ್ಥೆಯು ಕೋರಮಂಗಲದ ಸೇಂಟ್ ಜಾನ್ಸ್ ಸಭಾಂಗಣದಲ್ಲಿ ಆಗಸ್ಟ್‌ 8 ರಿಂದ 10ರವರೆಗೆ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ ಹಮ್ಮಿಕೊಂಡಿದೆ.

ಮೂರು ದಿನಗಳ ಈ ಉತ್ಸವದಲ್ಲಿ ಸಾಹಿತ್ಯ ಗೋಷ್ಠಿಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ದೇಶ–ವಿದೇಶದ 350ಕ್ಕೂ ಅಧಿಕ ಸಾಹಿತಿಗಳು, ಕಲಾವಿದರು ಮತ್ತು ವಿಷಯ ತಜ್ಞರು ಭಾಗವಹಿಸುತ್ತಾರೆ. ಈ ಬಾರಿ ಎಂಟು ವಿವಿಧ ಸಮಾನಾಂತರ ವೇದಿಕೆಗಳಿರಲಿದ್ದು, 180 ಕ್ಕೂ ಅಧಿಕ ಗೋಷ್ಠಿಗಳು, ಎಂಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆರು ಭಾಷೆಗಳ ಕೃತಿಗಳನ್ನು ಒಳಗೊಂಡ ಪುಸ್ತಕ ಮಳಿಗೆಗಳು, ಮಕ್ಕಳ ಸಾಹಿತ್ಯ ಉತ್ಸವ, ಜನಪದ ಮಾರುಕಟ್ಟೆ, ಆಹಾರ ಮಳಿಗೆಗಳು ಸೇರಿ ಹಲವು ವಿಶೇಷತೆ ಉತ್ಸವದಲ್ಲಿ ಇರಲಿದೆ ಎಂದು ಸಂಸ್ಥೆ ತಿಳಿಸಿದೆ. 

ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿಯರಾದ ಬಾನು ಮುಷ್ತಾಕ್, ದೀಪಾ ಭಾಸ್ತಿ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ದಾಮೋದರ ಮೌಜೊ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ.ಕೃಷ್ಣ ಅವರ ಜತೆಗೆ ಸಾಹಿತ್ಯ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳುತ್ತಾರೆ. ಲಕ್ಷ್ಮೀ ಚಂದ್ರಶೇಖರ, ಬಿ.ಜಯಶ್ರೀ, ಪ್ರವೀಣ್ ಗೋಡ್ಖಿಂಡಿ, ಮಾನಸಿ ಪ್ರಸಾದ್, ಟಿ.ಎಂ. ಕೃಷ್ಣ, ಗಣಪತಿ ಭಟ್ ಹಾಸಣಗಿ, ಬಿ-ಸ್ಟುಡಿಯೊ ಮತ್ತು ಬೆಂಗಳೂರು ಕ್ಲಬ್ ಆಫ್ ಕಥಕ್ಕಳಿ ತಂಡಗಳಿಂದ ಮೂರೂ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದೆ. 

ADVERTISEMENT

‘ದಕ್ಷಿಣ ಭಾರತದ ನಾಲ್ಕು ಭಾಷೆಗಳು ಮತ್ತು ಇಂಗ್ಲಿಷ್ ಒಳಗೊಂಡು ಒಟ್ಟು ಐದು ಭಾಷೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ದಕ್ಷಿಣ ಭಾರತದ್ದಲ್ಲದ ಭಾಷೆಗಳಿಗೆ ಸ್ಥಾನ ನೀಡುವ ಸಲುವಾಗಿ, ಈ ವರ್ಷದಿಂದ ಭಾರತದ ಇನ್ನೊಂದು ಭಾಷೆಯನ್ನು ಆಹ್ವಾನಿತ ಭಾಷೆಯಾಗಿ ಪರಿಗಣಿಸುವ ಸಂಪ್ರದಾಯ ಆರಂಭಿಸುತ್ತಿದ್ದೇವೆ. ಈ ಬಾರಿ ಮರಾಠಿ ಆಹ್ವಾನಿತ ಭಾಷೆಯಾಗಿದೆ. ಸಾಹಿತ್ಯಾಸಕ್ತರಿಗೆ ಪ್ರವೇಶ ಉಚಿತ ಇರಲಿದ್ದು, ಪಾಲ್ಗೊಳ್ಳುವವರು ಹೆಸರನ್ನು ನೋಂದಾಯಿಸಿಕೊಳ್ಳಬೇಕು’ ಎಂದು ಉತ್ಸವದ ನಿರ್ದೇಶಕ ಸತೀಶ್ ಚಪ್ಪರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸರು ನೋಂದಣಿಗೆ: www.bookbrahmalitfest.com  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.