ADVERTISEMENT

ಬೆಂಗಳೂರು | ‘ಮಾನವೀಯತೆ ಕಲಿಸದ ಓದಿಗೆ ಅರ್ಥವಿಲ್ಲ’

​ಪ್ರಜಾವಾಣಿ ವಾರ್ತೆ
Published 25 ಮೇ 2025, 16:12 IST
Last Updated 25 ಮೇ 2025, 16:12 IST
   

ಬೆಂಗಳೂರು: ‘ಯಾವುದೇ ಓದು ನಮ್ಮನ್ನು ಬದಲಾಯಿಸದಿದ್ದರೆ, ಮಾನವೀಯತೆ ಕಲಿಸದಿದ್ದರೆ ಆ ಓದಿಗೆ ಅರ್ಥ ಇರುವುದಿಲ್ಲ’ ಎಂದು ಲೇಖಕಿ ಸಂಧ್ಯಾರಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂಕಿತ ಪುಸ್ತಕ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಾ. ದಾಮೋದರ ಶೆಟ್ಟಿ ಅವರ ‘ಕರಿಮಾಯಿ ಗುಡ್ಡ’, ಜಯಪ್ರಕಾಶ ಮಾವಿನಕುಳಿ ಅವರ ‘ಪ್ರಾಣಪಕ್ಷಿಯ ಅರಸುತ್ತಾ’, ಎನ್.ಸಿ. ಮಹೇಶ್ ಅವರ ‘ಅಗೆಲು’, ಕೆ.ಎಂ. ವಿಜಯಲಕ್ಷ್ಮಿ ಅವರು ಸಂಪಾದಿಸಿರುವ ‘ಪರ್ವತವಾಣಿ ಅವರ ಇಷ್ಟಾರ್ಥ ಮತ್ತು ಇತರ ನಾಟಕಗಳು’ ಹಾಗೂ ‘ಪರ್ವತವಾಣಿ ಅವರ ವಾರ್ಷಿಕೋತ್ಸವ ಮತ್ತು ಇತರ ನಾಟಕಗಳು’ ಪುಸ್ತಕಗಳು ಬಿಡುಗಡೆಯಾದವು. 

ಈ ವೇಳೆ ಮಾತನಾಡಿದ ಸಂಧ್ಯಾರಾಣಿ, ‘ಓದಿನಿಂದ ನಮ್ಮನ್ನ ನಾವು ಬದಲಾಯಿಸಿಕೊಳ್ಳಬೇಕು. ಓದು ಉಳಿಯಲು ಕಣ್ಣು ಮತ್ತು ಮನಸ್ಸಿನ ನಡುವೆ ಜಾಗ ಇರಬೇಕು. ಅಸಹನೆ, ನಿಂದಿಸುವ ಗುಣವನ್ನೇ ರೂಢಿಸಿಕೊಂಡರೆ ಓದುವಿಕೆಗೆ ಅರ್ಥ ಇರುವುದಿಲ್ಲ. ನಮ್ಮ ಮೌಲ್ಯಗಳು ಓದಿನಿಂದ ಓದಿಗೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಯಾವುದೇ ಕಾದಂಬರಿಯನ್ನು ಓದಿದ ನಂತರ ಅದು ನಮ್ಮನ್ನು ಪ್ರಶ್ನಿಸುತ್ತಾ ಇರಬೇಕು. ಹೀಗೆ ಕಾಡುವ ಪುಸ್ತಕಗಳು ನಮ್ಮನ್ನು ಉತ್ತಮ ಮನುಷ್ಯರನ್ನಾಗಿಸಲಿವೆ’ ಎಂದರು. 

ADVERTISEMENT

ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ (ಗಿರೀಶ್ ರಾವ್ ಹತ್ವಾರ್), ‘ಕತೆಯನ್ನು ಓದುವಾಗ ಒಂದು ರೀತಿಯ ರೋಚಕತೆ ಇಲ್ಲದೇ ಹೋದರೆ ಓದುಗರನ್ನು ಹಿಡಿದಿಡುವುದು ಕಷ್ಟ. ಪುಸ್ತಕ ಓದುವ ಮೊದಲೇ ಆ ಕೃತಿಯ ಬಗ್ಗೆ ನಿರೀಕ್ಷೆ ಮಾಡುವುದು ಅಥವಾ ಈ ಲೇಖಕ ಹೀಗೆ ಬರೆಯುತ್ತಾನೆ ಎಂದು ಪ್ರತಿಕ್ರಿಯಿಸುವುದು ತಪ್ಪು’ ಎಂದು ಹೇಳಿದರು.

ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಹಾಗೂ ಬಿಡುಗಡೆಯಾದ ಪುಸ್ತಕಗಳ ಲೇಖಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.