ADVERTISEMENT

ನಿರಂಜನರ ಬರವಣಿಗೆಯಲ್ಲಿ ದೃಶ್ಯಕ ಶಕ್ತಿ: ರಂಗಕರ್ಮಿ ಬಿ. ಸುರೇಶ್

‘ನಿರಂಜನ 100 ಮರು ಓದು’ ಕಾರ್ಯಕ್ರಮದಲ್ಲಿ ನಾಲ್ಕು ಪುಸ್ತಕಗಳು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 16:29 IST
Last Updated 27 ಜುಲೈ 2024, 16:29 IST
ಕಾರ್ಯಕ್ರಮದಲ್ಲಿ ಬಿ. ಸುರೇಶ್ (ಮಧ್ಯದಲ್ಲಿರುವರು) ಅವರು ‘ಧ್ವನಿ ನಿರಂಜನ ಕಥಾ ಸಮುಚ್ಛಯ–1’, ‘ಧ್ವನಿ ನಿರಂಜನ ಕಥಾ ಸಮುಚ್ಛಯ–2’, ‘ಕನಸು’ ಹಾಗೂ ‘ಮೃತ್ಯುಂಜಯ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಕ್ರಿಯಾ ಮಾಧ್ಯಮದ ಕೆ.ಎಸ್ ವಿಮಲಾ, ತೇಜಸ್ವಿನಿ ನಿರಂಜನ, ಬಿ.ಆರ್. ಮಂಜುನಾಥ್ ಮತ್ತು ವಸಂತರಾಜ ಎನ್.ಕೆ ಉಪಸ್ಥಿತರಿದ್ದರು -ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಬಿ. ಸುರೇಶ್ (ಮಧ್ಯದಲ್ಲಿರುವರು) ಅವರು ‘ಧ್ವನಿ ನಿರಂಜನ ಕಥಾ ಸಮುಚ್ಛಯ–1’, ‘ಧ್ವನಿ ನಿರಂಜನ ಕಥಾ ಸಮುಚ್ಛಯ–2’, ‘ಕನಸು’ ಹಾಗೂ ‘ಮೃತ್ಯುಂಜಯ’ ಪುಸ್ತಕಗಳನ್ನು ಬಿಡುಗಡೆ ಮಾಡಿದರು. (ಎಡದಿಂದ) ಕ್ರಿಯಾ ಮಾಧ್ಯಮದ ಕೆ.ಎಸ್ ವಿಮಲಾ, ತೇಜಸ್ವಿನಿ ನಿರಂಜನ, ಬಿ.ಆರ್. ಮಂಜುನಾಥ್ ಮತ್ತು ವಸಂತರಾಜ ಎನ್.ಕೆ ಉಪಸ್ಥಿತರಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಿರಂಜನ ಅವರ ಕೃತಿಗಳನ್ನು ದೃಶ್ಯ ಮಾಧ್ಯಮಕ್ಕೆ ತರುವ ಅಗತ್ಯ ಈಗ ಹೆಚ್ಚಾಗಿದೆ’ ಎಂದು ರಂಗಕರ್ಮಿ ಬಿ. ಸುರೇಶ್ ಹೇಳಿದರು. 

ಐಬಿಎಚ್ ಪ್ರಕಾಶನ ಮತ್ತು ಕ್ರಿಯಾ ಮಾಧ್ಯಮ ಜಂಟಿಯಾಗಿ ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ನಿರಂಜನ 100 ಮರು ಓದು’ ಕಾರ್ಯಕ್ರಮದಲ್ಲಿ ‘ಧ್ವನಿ ನಿರಂಜನ ಕಥಾ ಸಮುಚ್ಛಯ–1’, ‘ಧ್ವನಿ ನಿರಂಜನ ಕಥಾ ಸಮುಚ್ಛಯ–2’, ಕಾದಂಬರಿಗಳ ಸಂಗ್ರಹ ‘ಕನಸು’ ಹಾಗೂ ಎಂ.ಎ.ಹೆಗಡೆ ಅವರ ನಾಟಕ ‘ಮೃತ್ಯುಂಜಯ’ ಪುಸ್ತಕಗಳು ಬಿಡುಗಡೆಯಾದವು.

ಈ ವೇಳೆ ನಿರಂಜನ ಅವರ ಜತೆಗಿನ ಒಡನಾಟ ಹಾಗೂ ಅವರ ಕಾದಂಬರಿ ‘ಚಿರಸ್ಮರಣೆ’ಯನ್ನು ರಂಗಕ್ಕೆ ಅಳವಡಿಸಿದ ಬಗೆ ವಿವರಿಸಿದ ಬಿ. ಸುರೇಶ್, ‘ನಿರಂಜನ ಅವರ ಬರವಣಿಗೆಗೆ ದೃಶ್ಯಕ ಶಕ್ತಿಯಿತ್ತು. ಅವರ ಕೃತಿಗಳನ್ನು ದೃಶ್ಯ ಮಾಧ್ಯಮಕ್ಕೆ ತಂದಿರುವ ಬಹುತೇಕರು ಭಾವನಾತ್ಮಕ ವಿವರಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಅವರ ಕಥೆ, ನಾಟಕದ ತಿರುಳು ಹೋರಾಟ. ಅವರ ತಾತ್ವಿಕ ಮತ್ತು ಸೈದ್ಧಾಂತಿಕ ನಿಲುವನ್ನು ಗೃಹಿಸಿ, ಕೃತಿಗಳನ್ನು ದೃಶ್ಯ ಮಾಧ್ಯಮಕ್ಕೆ ತರಬೇಕು. ಆ ಮೂಲಕ ನಿರಂಜನರಿಗೆ ಗೌರವ ನೀಡಬೇಕು’ ಎಂದರು.

ADVERTISEMENT

ನಿರಂಜನ ಅವರ ಪತ್ರ, ಪತ್ರಿಕಾ ಲೇಖನ, ಮತ್ತು ಕಾದಂಬರಿಗಳ ಅನುವಾದದ ಬಗ್ಗೆ ಲೇಖಕಿ ತೇಜಸ್ವಿನಿ ನಿರಂಜನ ಮಾತನಾಡಿ, ‘ತಂದೆ ನಿರಂಜನ ಅವರ ಕಾದಂಬರಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದೆ. ಅದರಲ್ಲೂ ಮೂಲ ಲೇಖಕರು ಜತೆಯಲ್ಲಿದ್ದರೆ ವ್ಯಾಖ್ಯಾನದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. ಅವರ ಕಾದಂಬರಿ ಅನುವಾದ ಮಾಡುವಾಗ ಎದುರಾದ ದೊಡ್ಡ ಸವಾಲು ಅಲಂಕಾರದ ಶೂನ್ಯ ಸ್ಥಿತಿ. ಪ್ರಾದೇಶಿಕ ಆಡುಮಾತಿನ ವರಸೆ ನಿರಾಕರಿಸಿ, ತಮ್ಮ ಕೃತಿ ಹೆಚ್ಚು ಜನರಿಗೆ ತಲುಪವಂತೆ ಮಾಡಿದರು’ ಎಂದು ಹೇಳಿದರು.

‘ನಿರಂಜನ ಕಥಾ ಪ್ರಪಂಚ’ ವಿಷಯದ ಬಗ್ಗೆ ಬಿ.ಆರ್. ಮಂಜುನಾಥ್, ‘ನಿರಂಜನರ ಕಾದಂಬರಿಗಳು’ ವಿಷಯದ ಬಗ್ಗೆ ಚ.ಹ. ರಘುನಾಥ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.