ADVERTISEMENT

ವಿಮರ್ಶೆಗೆ ಜಾಗ ಇಲ್ಲದಂತಾಗಿದೆ- ವಿವೇಕ ಶಾನಭಾಗ ಬೇಸರ

‘ನುಡಿ ಮಿಲನ’ ಕಾರ್ಯಕ್ರಮದಲ್ಲಿ ಕಥೆಗಾರ ವಿವೇಕ ಶಾನಭಾಗ ಬೇಸರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:57 IST
Last Updated 31 ಮಾರ್ಚ್ 2024, 15:57 IST
<div class="paragraphs"><p>ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ&nbsp;ವೀರಲೋಕ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ‘ನುಡಿ ಮಿಲನ’ ಕಾರ್ಯಕ್ರಮದಲ್ಲಿ ಲೇಖಕ ಕೇಶವ ಮಳಗಿ (ಎಡದಿಂದ ಮೂರನೆಯವರು) ಐದು ಕೃತಿಗಳನ್ನು ಬಿಡುಗಡೆ ಮಾಡಿದರು.  </p></div>

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವೀರಲೋಕ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ‘ನುಡಿ ಮಿಲನ’ ಕಾರ್ಯಕ್ರಮದಲ್ಲಿ ಲೇಖಕ ಕೇಶವ ಮಳಗಿ (ಎಡದಿಂದ ಮೂರನೆಯವರು) ಐದು ಕೃತಿಗಳನ್ನು ಬಿಡುಗಡೆ ಮಾಡಿದರು.

   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸೃಜನಶೀಲ ಸಾಹಿತ್ಯ ಸೃಷ್ಟಿಗೆ ವಿಮರ್ಶೆ ಅತ್ಯಗತ್ಯ. ವಿಮರ್ಶೆ ಇಲ್ಲದಿದ್ದರೆ ಸಾಹಿತ್ಯ ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಆದರೆ, ಈಗ ಕನ್ನಡದಲ್ಲಿ ವಿಮರ್ಶೆಗೆ ಜಾಗ ಇಲ್ಲದಂತಾಗಿದೆ’ ಎಂದು ಕಥೆಗಾರ ವಿವೇಕ ಶಾನಭಾಗ ಬೇಸರ ವ್ಯಕ್ತಪಡಿಸಿದರು.

ADVERTISEMENT

ವೀರಲೋಕ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ನುಡಿ ಮಿಲನ’ ಕಾರ್ಯಕ್ರಮದಲ್ಲಿ ಕೇಶವ ಮಳಗಿ ಅವರು ಸಂಪಾದಿಸಿರುವ ‘ಕುಸುರೆಳ್ಳು’ ಹಾಗೂ ‘ಕಥಾ ಸಂಕ್ರಾಂತಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ‘ಕಥಾ ಸಂಕ್ರಾಂತಿ’ ಪುಸ್ತಕವು ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿದೆ. 

ಈ ಕಾರ್ಯಕ್ರಮದಲ್ಲಿ ಮಾತನಾಡಿದ ವಿವೇಕ ಶಾನಭಾಗ, ‘ಇತ್ತೀಚೆಗೆ ಪತ್ರಿಕೆಗಳಲ್ಲಿಯೂ ಪುಸ್ತಕ ವಿಮರ್ಶೆಗಳು ಅಷ್ಟಾಗಿ ಬರುತ್ತಿಲ್ಲ. ಹೊಸ ಬರಹಗಾರರಿಗೂ ವಿಮರ್ಶೆಯಲ್ಲಿ ಆಸಕ್ತಿ ಕಡಿಮೆ ಆಗುತ್ತಿದೆ. ಬರವಣಿಗೆಯ ಕೌಶಲ ವೃದ್ಧಿಯಾಗಬೇಕಾದರೆ ವಿಮರ್ಶೆಗಳನ್ನು ಓದಬೇಕಾಗುತ್ತದೆ. ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಕಥೆಗಳನ್ನು ಮಾದರಿ ಕಥೆಗಳೆಂದು ಸ್ವೀಕರಿಸಬಾರದು. ಕನ್ನಡಕ್ಕೆ ದೊಡ್ಡ ಕಥಾ ಪರಂಪರೆಯಿದೆ. ಹಿಂದೆ ‘ಪ್ರಜಾವಾಣಿ’ ಕಥಾ ಸ್ಪರ್ಧೆಯಲ್ಲಿ ಮೂರನೇ, ಸಮಾಧಾನಕರ ಬಹುಮಾನ ಪಡದವರೂ ಮುಂದೆ ದೊಡ್ಡ ಕಥೆಗಾರರಾಗಿ ಹೊರಹೊಮ್ಮಿದ್ದಾರೆ’ ಎಂದು ಹೇಳಿದರು. 

‘ಕಥೆಗಳನ್ನು ಬರೆಯುವವರು ತಮ್ಮ ಅನುಭವಕ್ಕೆ ಚಿಂತನೆಯ ಸ್ಪರ್ಶ ನೀಡಬೇಕು. ಅನುಭವ ಆಕಾರ ಪಡೆಯಲು ಸಮಯ ಬೇಕಾಗುತ್ತದೆ. ಎಲ್ಲವನ್ನೂ ಸಿದ್ಧ ಶಬ್ದಗಳಲ್ಲಿ ಹೇಳದೆ, ಹೊಸ ಮಾದರಿ ಸೃಷ್ಟಿಸಬೇಕು’ ಎಂದು ತಿಳಿಸಿದರು. 

ಕಥೆಗಾರ ಕೇಶವ ಮಳಗಿ, ‘ಇತ್ತೀಚೆಗೆ ಹಣದಿಂದ ಕಥಾ ಸ್ಪರ್ಧೆಗಳನ್ನು ನೋಡುತ್ತಿದ್ದೇವೆ. ದೊಡ್ಡ ಮೊತ್ತದ ನಗದು ಬಹುಮಾನವಿದ್ದಾಗ ಉತ್ತಮ ಕಥೆಗಳು ಬರುತ್ತವೆ ಎನ್ನಲು ಸಾಧ್ಯವಿಲ್ಲ. ಕನ್ನಡದ ಕಥೆಗಳ ಬಗ್ಗೆ ಸಿದ್ಧ ಮಾದರಿಯಲ್ಲಿದ್ದೇವೆ. ಕನ್ನಡದಲ್ಲಿ ಅನುವಾದಕರನ್ನು ಹುಡುಕುವುದು ಕಷ್ಟ’ ಎಂದು ಹೇಳಿದರು. 

ಇಂಗ್ಲಿಷ್ ಲೇಖಕಿ ಕಾವೇರಿ ನಂಬೀಸನ್, ‘ವಿವಿಧ ವ್ಯಕ್ತಿತ್ವಗಳನ್ನು ಅರ್ಥ ಮಾಡಿಕೊಂಡಾಗ ಬರವಣಿಗೆ ಸುಲಭವಾಗುತ್ತದೆ. ಬರಹಗಾರರು ಓದುವಿಕೆಯನ್ನು ರೂಢಿಸಿಕೊಳ್ಳಬೇಕು’ ಎಂದು ತಿಳಿಸಿದರು. 

ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ್, ‘ಹೊರ ರಾಜ್ಯಗಳಲ್ಲಿಯೂ ಪುಸ್ತಕಗಳ ಬಿಡುಗಡೆಗೆ ಯೋಜನೆ ರೂಪಿಸಲಾಗುತ್ತಿದೆ. ಬೇರೆ ಬೇರೆ ಭಾಷೆಗೆ ಕನ್ನಡದ ಪುಸ್ತಕಗಳನ್ನು ಅನುವಾದಿಸಿ, ಪ್ರಕಟಿಸಲಾಗುತ್ತಿದೆ’ ಎಂದು ಹೇಳಿದರು. 

ಅನುವಾದಕರಾದ ಸುಧಾಕರನ್ ರಾಮಂತಳಿ ಹಾಗೂ ಅಶೋಕ್ ಪಿನ್ನಮನೇನಿ ಅವರು ಅನುವಾದದ ಮಹತ್ವದ ಬಗ್ಗೆ ಮಾತನಾಡಿದರು. 

Cut-off box - ಪುಸ್ತಕ ಪರಿಚಯ  ಪುಸ್ತಕ: ‘ಕುಸುರೆಳ್ಳು’ ಸಂಪಾದಕರು: ಕೇಶವ ಮಳಗಿ ಪುಟಗಳು: 268 ಬೆಲೆ: ₹320 *** ಪುಸ್ತಕ: ‘ಕಥಾ ಸಂಕ್ರಾಂತಿ’ ಸಂಪಾದಕರು: ಕೇಶವ ಮಳಗಿ ಪುಟಗಳು: 156 ಬೆಲೆ: ₹185 *ಎರಡೂ ಪುಸ್ತಕಗಳನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.